– ಕೊರೊನಾಗೆ ಭಾರತದ ಮೊದಲ ಲಸಿಕೆ
ಹೈದರಾಬಾದ್: ಕೋವಿಡ್ 19ಗೆ ಭಾರತದ ಕಂಪನಿಯೊಂದು ಲಸಿಕೆಯನ್ನು ಕಂಡು ಹಿಡಿದಿದೆ. ಆಗಸ್ಟ್ 15ರೊಳಗೆ ಸಾರ್ವಜನಿಕ ಬಳಕೆಗಾಗಿ ಈ ಲಸಿಕೆ ಬಿಡುಗಡೆ ಮಾಡುವ ಬಗ್ಗೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮಾಹಿತಿ ನೀಡಿದೆ.
ಈ ಕೋವಾಕ್ಸಿನ್ ಎಂಬ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಡುಹಿಡಿದಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್(ಎನ್‍ಐವಿ) ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಇದೀಗ ಲಸಿಕೆ ಬಿಡುಗಡೆಯ ಬಗ್ಗೆ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಲಸಿಕೆ ಪ್ರಯೋಗ ಪ್ರಕ್ರಿಯೆಯನ್ನು ಪಾಸ್ಟ್ ಟ್ರ್ಯಾಕ್ ವಿಧಾನದಲ್ಲಿ ಪೂರ್ಣಗೊಳಿಸಿ. ಇದರಿಂದ ಆಗಸ್ಟ್ 15ರೊಳಗೆ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಬಹುದು ಎಂದು ಬಲರಾಮ್ ಭಾರ್ಗವ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಐಸಿಎಂಆರ್, ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಮುಖ್ಯಸ್ಥ ಸುರೇಶ್. ಜಿ ಭಾಟೆ ಅವರಿಗೂ ಪತ್ರ ಬರೆದಿದೆ.
ಈ ಹಿಂದೆ ಭಾರತ್ ಬಯೋಟಿಕ್ ಕಂಪನಿಯ ಆಡಳಿತ ನಿರ್ದೇಶಕ ಕೃಷ್ಣ ಪ್ರತಿಕ್ರಿಯಿಸಿ, ಕೊವಾಕ್ಸಿನ್ ದೇಶದ ಮೊದಲ ಕೋವಿಡ್ 19 ಔಷಧಿ ಎಂದು ಹೇಳಲು ಬಹಳ ಹೆಮ್ಮೆ ಆಗುತ್ತದೆ. ಅಲ್ಲದೆ ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.