ನವದೆಹಲಿ: ಆಗಸ್ಟ್ ಮೂರನೇ ವಾರದಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವಿಯಾ ನೀಡಿದ್ದಾರೆ.
ಮಂಗಳವಾರ ಸಂಸದ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಸಭೆಯಲ್ಲಿ ವ್ಯಾಕ್ಸಿನೇಷನ್ ನೀಡುವ ಕುರಿತು ಮನ್‍ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮಾತುಗಳನ್ನಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ದೇಶ ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದು, ಮೂರನೇ ಅಲೆಯ ಆತಂಕದ ಹೊಸ್ತಿಲಿನಲ್ಲಿದೆ. ಮೂರನೇ ಅಲೆ ಮಕ್ಕಳ ಮೇಲೆಯೇ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
ದೇಶದ ಹಲವೆಡೆ ವಿವಿಧ ಹಂತಗಳಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಭಾರತ್ ಬಯೋಟೆಕ್ ಸಹ ಲಸಿಕೆಯ ಪ್ರಯೋಗ ನಡೆಸಿದ್ದು, ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಲಭ್ಯವಾಗುವ ಸಾಧ್ಯತೆಗಳಿವೆ. ಜಾಯಿಡ್ಸ್ ಕ್ಯಾಡಿಲ್ ನಡೆಸಿದ ಟ್ರಯಲ್ ಅಂತಿಮಗೊಂಡಿದ್ದು, ಶೀಘ್ರವೇ ಲಸಿಕೆಗೆ ಅನುಮತಿ ಸಿಗಲಿದೆ. ಇದನ್ನೂ ಓದಿ: 20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ
ಇತ್ತ ವಿಶ್ವದಲ್ಲಿ ಫೈಜರ್, ಮೊಡೆರ್ನಾ ವಿದೇಶಿ ಕಂಪನಿಗಳು 12 ರಿಂದ 17 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡುತ್ತಿವೆ. ಈ ಲಸಿಕೆಗಳಿಗೆ ಭಾರತದಲ್ಲಿ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ. ಇದುವರೆಗೂ 44 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, 9 ಕೋಟಿಗೂ ಅಧಿಕ ಜನರು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದಾರೆ. ಇದನ್ನೂ ಓದಿ: ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ