– ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಮಾಹಿತಿ
ಉಡುಪಿ: ಸಪ್ಟೆಂಬರ್ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳ ಹೊಳೆಯಲಿದೆ. ಕಡು ಕೆಂಬಣ್ಣದಲ್ಲಿ ಮಂಗಳ ಗ್ರಹ ಬಹಳ ಆಕರ್ಷಕವಾಗಿ ಗೋಚರವಾಗುತ್ತಿದೆ. ಭೂಮಿ ಮೇಲೆ ನಿಂತರೆ ಆಗಸದಲ್ಲಿ ನಡೆಯುವ ಬದಲಾವಣೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ಇದೆ.
ಅಕ್ಟೊಬರ್ 13ರಂದು ಮಂಗಳ ಗ್ರಹ, ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಹತ್ತಿರ ಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ಮಂಗಳ ಬಹಳ ದೊಡ್ಡದಾಗಿ ಕಂಡು ಇಡೀ ರಾತ್ರಿ ಆಗಸದಲ್ಲಿ ಹವಳದಂತೆ ಕಾಣಿಸಲಿದೆ.
ಸುಮಾರು 24 ಕೋಟಿ ಕಿ.ಮೀ ದೂರದಲ್ಲಿ ದೀರ್ಘ ವ್ರತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ ಸಮಿಪಿಸಿ ಮತ್ತೆ ದೂರ ಸರಿಯುತ್ತವೆ ಎಂದು ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ಕಿಲೋ ಮೀಟರ್ ದೂರದಲ್ಲಿ, ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕೀಮೀ ದೂರದಲ್ಲಿರುತ್ತಾ ಚಿಕ್ಕದಾಗಿ ಗೋಚರಿಸುತ್ತದೆ. ಮಳೆ ಕಡಿಮೆಯಾಗಿದೆ. ಮೋಡ ಸರಿದು ಆಗಸ ಸ್ವಚ್ಛವಾಗಿರುವ ಈ ಸಂದರ್ಭದಲ್ಲಿ ಈ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಿ ಎಂದು ಭಟ್ ಸಲಹೆ ನೀಡಿದ್ದಾರೆ.
ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮಂಗಳ ಮೀರಿಸಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ನಾಡಿದ್ದು ಅಕ್ಟೋಬರ್ ಒಂದರಂದು ಮಂಗಳ ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು. ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೋಡವಿಲ್ಲದ ಕಡೆ ಈ ಕೌತುಕ ಕಣ್ತುಂಬಿಕೊಳ್ಳಬಹುದು.