ಆಕ್ಸಿಜನ್ ದುರಂತ: 36 ಜನರ ಸಾವು, ಸರ್ಕಾರ ಮಾಡಿದ ಕೊಲೆ: ಡಿಕೆಶಿ

Public TV
2 Min Read
DKSHI CN Oxygen Tragedy 1

– ಮೃತ ಕುಟಂಬಸ್ಥರಿಗೆ ಕಾಂಗ್ರೆಸ್‍ನಿಂದ ಚೆಕ್ ವಿತರಣೆ

ಚಾಮರಾಜನಗರ: ಮೇ ಎರಡರಂದು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ 36 ಕುಟುಂಬಗಳಿಗೂ ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೃತರ ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ತಲಾ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.

DK Shivakumar Oxygen Tragedy 1 medium

ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಗಳನ್ನು ಅವರ ಗ್ರಾಮಗಳಿಗೇ ತೆರಳಿ ಭೇಟಿ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಾಥ್ ನೀಡಿದರು. ಮೊದಲು ಹನೂರು ತಾಲೋಕು ಚನ್ನಿಪುರದದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮೃತ ರಂಗಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದ ಡಿ.ಕೆ.ಶಿವಕುಮಾರ್, ಇತ್ತೀಚೆಗೆ ಕೋವಿಡ್ ನಿಂದ ಮೃತಪಟ್ಟ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ ಅವರ ಇಕ್ಕಡಹಳ್ಳಿಯ ನಿವಾಸಕ್ಕೂ ತೆರಳಿ ಮೃತರ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

DK Shivakumar Oxygen Tragedy 2 medium

ಈ ಸಂದರ್ಭದಲ್ಲಿ ಆಕ್ಸಿಜನ್ ದುರಂತದ ಬಗ್ಗೆ ಮಾತನಾಡಿದ ಅವರು, ಇದು ಸರ್ಕಾರವೇ ಮಾಡಿದ ಕೊಲೆ ಎಂದು ವಾಗ್ದಾಳಿ ನಡೆಸಿದರು. 36 ಮಂದಿ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದ್ದು, ಘಟನೆಗೆ ಕಾರಣರಾದವರ ಒಬ್ಬರ ಮೇಲೆಯೂ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ. ದುರಂತ ನಡೆದ ಸಂದರ್ಭದಲ್ಲಿ ಇಲ್ಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಬೇಕಿತ್ತು. ಆದರೆ ಇಲ್ಲಿಗೆ ಭೇಟಿ ನೀಡಲು ಅವರಿಗೆ ಭಯವಾಗಿದೆ. ಜನರು ಆಕ್ರೋಶಗೊಂಡಿದ್ದಾರೆ ಎಂದು ಗೊತ್ತಾಗಿದೆ, ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಇದೆ. ಹಾಗಾಗಿಯೇ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.

DK Shivakumar Oxygen Tragedy 3 medium

ಮುಂದಿನ ಸಿಎಂ ಡಿಕೆಶಿ, ಕಾರ್ಯಕರ್ತರ ಘೋಷಣೆ:
ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಪರ ವಿರೋಧ ಹೇಳಿಕೆಗಳು ಬರುತ್ತಿರುವ ಈ ಸಂದರ್ಭದಲ್ಲೇ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಕೆಶಿಗೆ ಜಯಕಾರ ಹಾಕಿದ ಕೈ ಕಾರ್ಯಕರ್ತರು ಕನಕಪುರ ಬಂಡೆಗೆ ಜೈ, ಕರುನಾಡಿನ ಹುಲಿಗೆ ಜೈ ಎಂದು ಜಯಕಾರದ ಘೋಷಣೆ ಮೊಳಗಿಸಿದರು. ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಶಿವಕುಮಾರ್ ಗೆ ಜೈ ಎಂದು ಘೋಷಣೆ ಕೂಗಿದರೂ ಡಿಕೆ ಶಿವಕುಮಾರ್ ಮಾತ್ರ ಮರು ಮಾತನಾಡಲಿಲ್ಲ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು– ನನ್ನಳಿಯ ನನಗೆ ಬೇಕು, ಮಗಳನ್ನ ಹೀಗೆ ನೋಡಲಾರೆ: ಕಣ್ಣೀರಿಟ್ಟ ಹೆತ್ತೊಡಲು

Share This Article
Leave a Comment

Leave a Reply

Your email address will not be published. Required fields are marked *