– ಆಕ್ಸಿಜನ್ ಕೊರತೆಯಿಂದ ಜನ ಸಾವನ್ನಪ್ಪಿದರೆ ಅಪರಾಧ ಕೃತ್ಯವೆಂದು ಪರಿಗಣಿಸಲಾಗುವುದು
ಲಕ್ನೋ: ಕೊರೊನಾ ಎರಡನೇ ಅಲೆಗೆ ತತ್ತರಿಸಿ ಜನ ಆಕ್ಸಿಜನ್ ಕೊರತೆಯಿಂದ ನರಳಾಡಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶದ ಅಲಹಬಾದ್ ಹೈ ಕೋರ್ಟ್, ಆಕ್ಸಿಜನ್‍ನಿಂದ ವ್ಯಕ್ತಿ ಮರಣ ಹೊಂದುವುದನ್ನು ಅಪರಾಧ ಕೃತ್ಯವೆಂದು ಪರಿಗಣಿಸಲಾಗುವುದು. ಅಲ್ಲದೆ ಇದು ಯಾವ ನರಮೇಧಕ್ಕಿಂತ ಕಡಿಮೇ ಏನಲ್ಲ ಎಂದು ಎಚ್ಚರಿಸಿದೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರ ಮಧ್ಯೆ ದೇಶಾದ್ಯಂತ ಆಕ್ಸಿಜನ್ ಕೊರತೆ ಕಾಡುತ್ತಿರುವುದನ್ನು ಅರಿತ ಕೋರ್ಟ್, ಈ ಕುರಿತು ಬೇಸರ ವ್ಯಕ್ತಪಡಿಸಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ನರಳಾಡಿ ಜನ ಸಾಯುತ್ತಿರುವುದನ್ನು ಕಂಡು ತುಂಬಾ ನೋವಾಗಿದೆ. ಆಮ್ಲಜನಕವಿಲ್ಲದೆ ಸಾವನ್ನಪ್ಪುತ್ತಿರುವುದು ಅಪರಾಧ ಕೃತ್ಯವಾಗಿದೆ, ಇದು ನರಮೇಧಕ್ಕಿಂತಲೂ ಕಡಿಮೆ ಏನಲ್ಲ. ಆಕ್ಸಿಜನ್ ನಿರಂತರ ಸಂಗ್ರಹಣೆ ಹಾಗೂ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳುವ ಕೆಲಸ ವಹಿಸಿಕೊಂಡವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ.
ತಮ್ಮ ಪ್ರೀತಿ ಪಾತ್ರರ ಪ್ರಾಣ ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್ ಗಳ ಸಂಗ್ರಹಣೆಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಆಕ್ಸಿಜನ್ ಕೇಳಲು ಬಂದ ಬಡ ಜನರಿಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ವೀಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದು ಕೋರ್ಟ್ ಕಿಡಿಕಾರಿದೆ.
ಭಾರತದಲ್ಲಿ ನಿತ್ಯ ನಾಲ್ಕು ಲಕ್ಷದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದ ಜನ ನರಳಾಡಿ ಪ್ರಾಣ ಬಿಡುತ್ತಿದ್ದಾರೆ. ಇಷ್ಟಾದರೂ ಆಡಳಿತ ಸರ್ಕಾರಗಳು ಮಾತ್ರ ಬೇಕಾಬಿಟ್ಟಿಯಾಗಿ ವರ್ತಿಸುತ್ತಿವೆ. ಹೀಗಾಗಿ ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.