ಹಾಸನ: ಜಿಲ್ಲೆಯಲ್ಲಿ ದಿನಕಳೆದಂತೆ ಸಮಸ್ಯೆಯಾಗುತ್ತಿರುವ ಆಕ್ಸಿಜನ್ ಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರ ಬಳಿ ಖಾಸಗಿ ಆಸ್ಪತ್ರೆಯ ವೈದ್ಯರು ಕೈ ಮುಗಿದು ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ವರದಿಯಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಭೇಟಿಯಾಗಿದ್ದರು. ಈ ವೇಳೆ ವೈದ್ಯರು ಆಕ್ಸಿಜನ್ ಸಮಸ್ಯೆ ಬಗೆಹರಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ. ಖಾಸಗಿಯವರಿಗೆ ಆಕ್ಸಿಜನ್ ಸರಿಯಾಗಿ ವಿತರಣೆ ಆಗುತ್ತಿಲ್ಲ. ನೀವು, ಡಿಸಿ ಹಾಗೂ ಎಲ್ಲಾ ಅಧಿಕಾರಿಗಳು ಸ್ಪಂದಿಸುತ್ತಿದ್ದೀರಿ. ಆದರೂ ನಾವು ಅಸಹಾಯಕರಾಗಿ ಹೋಗಿದ್ದೇವೆ. ನಮಗೆ ಕಷ್ಟವಾಗುತ್ತಿದೆ, ನಿಜವಾದ ಸ್ಥಿತಿ ಏನಿದೆ ಎಂಬುದನ್ನು ರೋಗಿಗೆ ಅರ್ಥ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಆಕ್ಸಿಜನ್ ಸಮಸ್ಯೆಯಾದಾಗ ಇರೋ ರೋಗಿಗಳನ್ನು ಡಿಸ್ಚಾರ್ಜ್ ಮಾಡಲು ಆಗುವುದಿಲ್ಲ. ಹೊಸದಾಗಿ ಅಡ್ಮಿಟ್ ಆಗಲೂ ಬಂದವರಿಗೆ ಅದು, ಇದು ಕಾರಣ ಕೊಟ್ಟು ಕಳುಹಿಸಬಹುದು. ಆದ್ರೆ ಈಗಾಗಲೇ ಅಡ್ಮಿಟ್ ಆಗಿರುವ ರೋಗಿಗಳಿಗೆ ಏನು ಮಾಡೋದು? ನಮಗೆ ನಿರ್ದಿಷ್ಟ ಪೇಷೆಂಟ್ ಎಂದು ವಹಿಸಿ, ಅವರಿಗಾಗುವಷ್ಟು ಆಕ್ಸಿಜನ್ ಕೊಡಿ, ನಾವು ಸರ್ಕಾರಕ್ಕೆ ಸ್ಪಂದಿಸುತ್ತೇವೆ, ಕೋವಿಡ್ ಪೇಷೆಂಟ್ ಒಂದ್ಕಡೆ, ನಾನ್ ಕೋವಿಡ್ ಪೇಷೆಂಟ್ ಒಂದ್ಕಡೆ, ಆಕ್ಸಿಜನ್ ಇಲ್ಲದೇ ಸಾಯುತ್ತಾರೆ, ಜನ ಗಲಾಟೆ ಮಾಡುತ್ತಾರೆ. ನಾವು ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.
ನೀವು ಆಕ್ಸಿಜನ್ ಸಹಾಯ ಮಾಡದಿದ್ದರೆ ನಾವು ರೋಗಿಗಳಿಗೆ ಚಿಕಿತ್ಸೆ ಕೊಡಲು ಅಸಹಾಯಕರಾಗುತ್ತೇವೆ. ಎಂದು ಪದೇ ಪದೇ ಕೈ ಮುಗಿದು ಸಚಿವರಿಗೆ ವೈದ್ಯರು ಮನವಿ ಮಾಡಿದ್ರು. ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಸಚಿವ ಗೋಪಾಲಯ್ಯ ಭರವಸೆ ನೀಡಿದರು.