ಶಿವಮೊಗ್ಗ: ಆಕಸ್ಮಿಕವಾಗಿ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ಪಕ್ಕದ ಮನೆಗಳಿಗೆ ಕಲ್ಲುಗಳು ಸಿಡಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರಿನಲ್ಲಿ ಘಟನೆ ನಡೆದಿದ್ದು, ಕಣ್ಣೂರು ಗ್ರಾಮದ ಸಂಗಿ ಕರಿಯಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕರಿಯಪ್ಪ ಪುತ್ರ ರವಿ ಪ್ರಾಣಿಗಳ ಶಿಕಾರಿಗಾಗಿ ತನ್ನ ಮನೆಯ ಬಾತ್ ರೂಮಿನಲ್ಲಿ ಸ್ವತಃ ತಾನೇ ನಾಡಬಾಂಬ್ ತಯಾರಿಸಿ ಸಂಗ್ರಹಿಸಿ ಇಟ್ಟಿದ್ದ ಎನ್ನಲಾಗಿದೆ.
ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಹ ಹಾರಿ ಹೋಗಿದ್ದು, ಮನೆಗೆ ಹಾನಿ ಉಂಟಾಗಿದೆ. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದು, ತಕ್ಷಣವೇ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚು ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ. ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.