ಅಮರಾವತಿ: ಆಂಧ್ರಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರ ಮೂರು ರಾಜಧಾನಿಗಳ ಪ್ರಸ್ತಾಪಕ್ಕೆ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಾಭೂಸನ್ ಹರಿಚಂದನ್ ಸಹಿ ಹಾಕಿದ್ದಾರೆ.
ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ವಲಯಗಳ ಸರ್ವಾಂಗೀಣ ಅಭಿವೃದ್ಧಿ ವಿಧೇಯಕ 2020 ಮಸೂದೆ ಶಾಸನ ಸಭೆಯಲ್ಲಿ ಪಾಸ್ ಆಗಿತ್ತು. ಈಗ ರಾಜ್ಯಪಾಲರು ಸಹಿ ಹಾಕುವ ಮೂಲಕ ಅಧಿಕೃತವಾಗಿ ಜಾರಿಯಾಗಲಿದೆ.
ಸಿಎಂ ಜಗನ್ ಸರ್ಕಾರ ಮೂರು ವಾರಗಳ ಹಿಂದೆ ವಿಧಾನಸಣೆಯಲ್ಲಿ ಮಸೂದೆಯನ್ನು ಮಂಡಿಸಿತ್ತು. ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದರು. ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ನಡುವಿನ ತೀವ್ರ ತಿಕ್ಕಾಟಕ್ಕೆ ಈ ಮಸೂದೆ ಕಾರಣವಾಗಿತ್ತು.
ಟಿಡಿಪಿ ಮುಖ್ಯಸ್ಥ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಅಮರಾವತಿ ರಾಜಧಾನಿ ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೇ ವಿಶ್ವದ ನಗರಗಳ ಪೈಕಿ ಅಮರಾವತಿಯೂ ಸೇರಲು ಜಗತ್ತಿನ ನಾನಾ ಕಂಪನಿಗಳಿಂದ ನಗರ ವಿನ್ಯಾಸದ ಕಲ್ಪನೆಯನ್ನು ಕೇಳಿದ್ದರು. ಈಗ ಈ ಎಲ್ಲ ಯೋಜನೆಗಳಿಗೆ ಜಗನ್ ಪೂರ್ಣ ವಿರಾಮ ಹಾಕಿದ್ದಾರೆ.
ಈ ಕಾಯ್ದೆಯಿಂದ ಇನ್ನು ಮುಂದೆ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿಯಾಗಿರುವ ವಿಶಾಖಪಟ್ಟಣ ಆಡಳಿತಾತ್ಮಕ ರಾಜಧಾನಿಯಾಗಲಿದೆ. ಅಮರಾವತಿ ಶಾಸನ ರಾಜಧಾನಿಯಾಗಿಯೇ ಮುಂದುವರಿಯಲಿದ್ದು, ನ್ಯಾಯ ರಾಜಧಾನಿಯಾಗಿ ಕರ್ನೂಲಿನಲ್ಲಿ ಹೈಕೋರ್ಟ್ ನಿರ್ಮಾಣವಾಗಲಿದೆ.