ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ನಾವು ವಿರೋಧ ಪಕ್ಷದಲ್ಲಿರಬೇಕಾಗುತ್ತದೆ – ಗುಲಾಂ ನಬಿ ಗುಡುಗು

Public TV
1 Min Read
ghulam nabi azad congress

ನವದೆಹಲಿ: ಕಾಂಗ್ರೆಸ್‌ ಆಂತರಿಕ ಕಿತ್ತಾಟ ಈಗ ಮತ್ತಷ್ಟು ಜಾಸ್ತಿಯಾಗಿದ್ದು ಕಪಿಲ್‌ ಸಿಬಲ್‌ ಬಳಿಕ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಈಗ ಬಹಿರಂಗವಾಗಿಯೇ ಗುಡುಗಿದ್ದಾರೆ.

ಒಂದು ವೇಳೆ ಪಕ್ಷದ ಒಳಗಡೆ ಆಂತರಿಕ ಚುನಾವಣೆ ನಡೆಯದೇ ಇದ್ದರೆ ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ನೇರವಾಗಿ ಹೇಳಿದ್ದಾರೆ.

ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ಚುನಾವಣೆಯ ಮೂಲಕ ಆಯ್ಕೆಯಾದ ಅಧ್ಯಕ್ಷರಿಗೆ ಶೇ.51 ಮಂದಿಯ ಬೆಂಬಲವಾದರೂ ಇರುತ್ತದೆ. ಆದರೆ ಖಾಯಂ ಅಧ್ಯಕ್ಷ­ರನ್ನು ನೇಮಕ ಮಾಡಿದರೆ ಅವರಿಗೆ ಪಕ್ಷದೊಳಗೆ ಶೇ.1ರಷ್ಟು ಕೂಡ ಬೆಂಬಲ ಸಿಗುವುದಿಲ್ಲ. ಹೀಗಾಗಿ ಆಂತರಿಕ ಚುನಾವಣೆ ಮೂಲಕವೇ ಹೊಸ ಆಧ್ಯ­ಕ್ಷರ ನೇಮಕವಾಗಬೇಕು. ಜತೆಗೆ ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯರನ್ನೂ ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಪಕ್ಷದ ಒಳಗಡೆ ಚುನಾವಣೆ ನಡೆಯದ ಕಾರಣ ನಾವು ಹಲವು ಚುನಾವಣೆಗಳನ್ನು ಸೋತಿದ್ದೇವೆ. ಒಂದು ವೇಳೆ ಚುನಾವಣೆ ನಡೆದರೆ ನಾಯಕರು ಪಕ್ಷ ಸಂಘಟನೆಯತ್ತ ಮನಸ್ಸು ಮಾಡುತ್ತಾರೆ. ಈಗಲೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Congress Rahul Gandhi 1 cwc sonia medium

ಪಕ್ಷದ ಬಗ್ಗೆ ಆಸಕ್ತಿ ಇರುವ ವ್ಯಕ್ತಿ ನಾನು ಜಿಲ್ಲಾ ಅಧ್ಯಕ್ಷ, ರಾಜ್ಯದ ಅಧ್ಯಕ್ಷನಾಗಬೇಕೆಂದು ಬಯಸುತ್ತಾನೆ. ಆದರೆ ಚುನಾವಣೆ ನಡೆಯದೇ ಸುಲಭವಾಗಿ ನೇಮಕಗೊಳ್ಳುವವರು ಈ ಪ್ರಸ್ತಾಪವನ್ನು ವಿರೋಧಿಸುತ್ತಾರೆ ಎಂದು ಟಾಂಗ್‌ ನೀಡಿದ್ದಾರೆ.

ಪಕ್ಷದ ಸುಧಾರಣೆ ಬಯಸಿ ಕಾಂಗ್ರೆಸ್‌ನ 23 ಹಿರಿಯ ನಾಯಕರು ಪತ್ರ ಬರೆದಿದ್ದರು. ಸೋಮವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಪತ್ರದ ವಿಚಾರವನ್ನು ಪ್ರಸ್ತಾಪಿಸಿ ರಾಹುಲ್‌ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ನಾಯಕರು ಬಿಜೆಪಿ ಜೊತೆ ಸೇರಿದ್ದಾರೆ ಎಂದು ದೂರಿದ್ದರು. ಈ ವೇಳೆ ನಾನು ಒಂದು ವೇಳೆ ಬಿಜೆಪಿ ಸೇರಿದ್ದು ಸಾಬೀತಾದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಜಾದ್‌ ಸವಾಲು ಎಸೆದಿದ್ದರು. ಬಳಿಕ ಈ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ. ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಕಾಂಗ್ರೆಸ್‌ ನಾಯಕರು ದೂರಿದ್ದರು.

Share This Article
Leave a Comment

Leave a Reply

Your email address will not be published. Required fields are marked *