– ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಕ್ಕೆ ಧನ್ಯವಾದ
ದಿಸ್ಪುರ್: ಅಸ್ಸಾಂನ ಶ್ರೀಮಂತ ಸಂಸ್ಕೃತಿಯನ್ನು ಉಳಿಸಲು ಬಿಜೆಪಿಗೆ ಮಾತ್ರ ಸಾಧ್ಯ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮೂರು ಕ್ಷೇತ್ರಗಳ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಮಾತ್ರ ಅಸ್ಸಾಂ ಸಂಸ್ಕೃತಿ ಉಳಿಸಲು ಸಾಧ್ಯ. ಸರ್ಬಾನಂದ ಸೋನೋವಾಲ್ ಅವರ ಸರ್ಕಾರ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಿದೆ ಎಂದು ತಿಳಿಸಿದರು.
ವಿಭಜನೆ ಹಾಗೂ ಆಡಳಿತ ಕಾಂಗ್ರೆಸ್ ನಿಯಮವಾಗಿದ್ದರೆ ಭಾರತೀಯ ಜನತಾ ಪಾರ್ಟಿ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಬಯಸುತ್ತದೆ. ರಾಜ್ಯದ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರಗಳು ಕಡೆಗಣಿಸಿವೆ. ಅವರು ಕೆಲವು ಪ್ರದೇಶಗಳನ್ನು ನಿರ್ಲಕ್ಷಿಸಿದ್ದರು ಆಗ ಅಭಿವೃದ್ಧಿ ಸ್ಥಗಿತಗೊಂಡಿತ್ತು. ಅವರಿಂದ ಅಸ್ಸಾಂಗೆ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಅದು ಬದಲಾಗಿದೆ. ಸತತ ಪ್ರಯತ್ನಗಳಿಂದ ಅಸ್ಸಾಂನ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಸಾಧ್ಯವಾಗಿದೆ ಹಾಗೂ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯಲು ರಾಜ್ಯ ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಬಿಜೆಪಿಯ ಕಾರ್ಯಸೂಚಿಯಲ್ಲಿ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣ ಸೇರಿವೆ ಎಂದು ಯುಪಿ ಸಿಎಂ ವಿವರಿಸಿದ್ದಾರೆ.
ಇದೇ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ ಈ ದೇವಾಲಯ ಇಡೀ ದೇಶದ ಗುರುತನ್ನು ಪ್ರತಿಬಿಂಬಿಸುತ್ತಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲು ಅಯೋಧ್ಯೆ ಸಜ್ಜಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರವಾಹದ ಸಮಸ್ಯೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಸಮಸ್ಯೆಯನ್ನು ಮುಕ್ತಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿವೆ ಎಂದು ತಿಳಿಸಿದ್ದಾರೆ.