ನವದೆಹಲಿ: ಪಂಚ ರಾಜ್ಯಗಳ ಪೈಕಿ ಇಂದು ಅಸ್ಸಾಂ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಅಸ್ಸಾಂನ 12 ಜಿಲ್ಲೆಗಳ 47 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೇಲ್ ಅಸ್ಸಾಂ, ಉತ್ತರ ಅಸ್ಸಾಂ ಪ್ರದೇಶದ 11 ಜಿಲ್ಲೆಗಳಿಂದ 42 ಕ್ಷೇತ್ರಗಳು ಹಾಗೂ ಮಧ್ಯ ಅಸ್ಸಾಂನ ನಾಗನ್ ಜಿಲ್ಲೆಯ 5 ಕ್ಷೇತ್ರಗಳು ಮೊದಲ ಹಂತದ ಮತದಾನದಲ್ಲಿ ಒಳಗೊಂಡಿದೆ.
47 ಕ್ಷೇತ್ರಗಳ ಪೈಕಿ 264 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ 11,537 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು 40,77,210 ಪುರುಷರು, 40,32,481 ಮಹಿಳೆಯರು ಸೇರಿದಂತೆ ಒಟ್ಟು 81,09,815 ಮತದಾರರಿಂದ ಮತ ಚಲಾವಣೆ ಮಾಡಲಿದ್ದಾರೆ.
Advertisement
Advertisement
ಸದ್ಯ ಚುನಾವಣೆ ನಡೆಯುತ್ತಿರುವ 47 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 35 ಸ್ಥಾನಗಳ ಮುನ್ನಡೆ ಪಡೆದಿತ್ತು. ಈಬಾರಿಯೂ ಇದೇ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ.
Advertisement
ಕಾಂಗ್ರೆಸ್ ಮಹಾಮೈತ್ರಿ – ಇಕ್ಕಟ್ಟಿನಲ್ಲಿ ಬಿಜೆಪಿ
ಇತ್ತ ಕಾಂಗ್ರೆಸ್ ಗೆಲುವಿಗಾಗಿ ಅಸ್ಸಾಂನಲ್ಲಿ ಪ್ರಾದೇಶಿಕ ಪಕ್ಷಗಳಾದ ಬೋಡೋ ಪೀಪಲ್ಸ್ ಫ್ರೆಂಟ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರೆಂಟ್ ಜೊತೆಗೆ ಮಹಾಮೈತ್ರಿ ಮಾಡಿಕೊಂಡಿದೆ.
Advertisement
ಬೋಡೋ ಬುಡಕಟ್ಟು ಸಮುದಾಯದ ಜನರಿಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯೊಂದಿಗೆ ಹುಟ್ಟಿಕೊಂಡ ಬೋಡೋ ಪೀಪಲ್ಸ್ ಫ್ರೆಂಟ್, ಕೊಖ್ರಾಜರ್, ಚಿರಾಂಗ್, ಉದಲ್ ಗುರಿ ಮತ್ತು ಬಕ್ಸಾ ಪ್ರದೇಶಗಳಲ್ಲಿ ಬಲಿಷ್ಠವಾಗಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ಬಿಪಿಎಫ್ ಈ ಬಾರಿಯೂ ಬಿಜೆಪಿಗೆ ಮಕಾಡೆ ಮಲಗಿಸುವ ಶಪಥ ಮಾಡಿದೆ.
ಮೌಲಾನಾ ಬದ್ರುದ್ದಿನ್ ಅಜ್ಮಲ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರೆಂಟ್ ಈ ಬಾರಿ ಮುಸ್ಲಿಂ ಮತಗಳ ಕ್ರೋಡಿಕರಣಕ್ಕೆ ಮುಂದಾಗಿದೆ. ಈ ಪಕ್ಷ ಸಿಎಎ, ಎನ್‍ಆರ್‍ಸಿ ವಿರೋಧಿ ಮತಗಳನ್ನು ಸೆಳೆಯುವ ಸಾಧ್ಯತೆಗಳಿದ್ದು ಕಾಂಗ್ರೆಸ್ ಗೆ ಇದು ಲಾಭವಾಗುವ ನಿರೀಕ್ಷೆಗಳಿವೆ. ಇವೆರಡು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‍ಗೆ ಬೆಂಬಲಿಸಿರುವ ಹಿನ್ನಲೆ ಬಿಜೆಪಿಗೆ ಹಿನ್ನಡೆಯಾಗಲೂಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಬಿಜೆಪಿಗೆ ಡ್ಯಾಮೇಜ್ ಮಾಡಲಿದೆ ತೃತೀಯ ದಳ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಖಿಲ್ ಗೋಗಯ್ ಮತ್ತು ಯುವ ನಾಯಕ ಲುರಿಂ ಜ್ಯೋತಿ ತೃತಿಯ ದಳದ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಸಿಎಎ ಹೋರಾಟದಲ್ಲಿ ಜೈಲು ಸೇರಿರುವ ಅಖಿಲ್ ಗೋಗಯ್ ಜೈಲಿನಿಂದಲೇ ಚುನಾವಣೆ ಸ್ಪರ್ಧಿಸಿದ್ದಾರೆ. ಇವರ ಪರ ತಾಯಿ ಪ್ರಚಾರ ನಡೆಸುತ್ತಿದ್ದು ಅಖೀಲ್ ಜೈಲಿನಿಂದಲೇ ಬಿಜೆಪಿ ಸೋಲಿಸುವ ಅಭ್ಯರ್ಥಿಗೆ ಮತ ನೀಡಿ ಅಸ್ಸಾಂ ಉಳಿಸಿ ಎಂದು ಪತ್ರ ಬರೆದಿದ್ದಾರೆ
ಈ ತೃತೀಯ ದಳ ಬಿಜೆಪಿಗೆ ಡ್ಯಾಮೇಜ್ ಮಾಡಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ ಹೀಗಾಗಿ ಈ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆಗೆ ಒಳ ಮೈತ್ರಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ತನ್ನ ಐದು ವರ್ಷಗಳ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು, ಅನೇಕ ಸವಾಲುಗಳ ನಡುವೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದೆ.
ಶಬ್ಬೀರ್ ನಿಡಗುಂದಿ