ಶಿವಮೊಗ್ಗ: ಪ್ರಪಂಚದಲ್ಲಿ ಜನಾನುರಾಗಿ ನಾಯಕರಲ್ಲಿ ಪ್ರಧಾನಿ ಮೋದಿ ಸಹ ಒಬ್ಬರು. ಪ್ರಪಂಚವೇ ಮೋದಿ ಅವರನ್ನ ಒಪ್ಪಿಕೊಳ್ಳುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸುಲಭ್ ಶೌಚಾಲಯಕ್ಕೆ ಮೋದಿ ಹೆಸರಿಡಿ ಎಂದು ಹೇಳುತ್ತಾರೆ. ಹೀಗಾಗಿಯೇ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದು. ಈಡೀ ಕಾಂಗ್ರೆಸ್ ನಾಯಕರ ವಿರುದ್ಧ ಬಳಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದರು.
ನಗರದಲ್ಲಿ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದ ಗೌರವಾನ್ವಿತ ಪ್ರಧಾನಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದರೆ ನಮಗೆ ಸಿಟ್ಟು ಬರುವುದಿಲ್ಲವಾ? ಹೀಗಾಗಿಯೇ ಆ ಸಂದರ್ಭದಲ್ಲಿ ನಾನು ಮಾತನಾಡಿದ್ದು ನಿಜ. ತಕ್ಷಣವೇ ನನ್ನ ಮಾತು ನನಗೆ ಅರಿವಾಗಿ, ಆ ಪದವನ್ನು ಹಿಂಪಡೆದು, ಕ್ಷಮೆ ಕೇಳಿದ್ದೇನೆ ಎಂದರು. ಇದನ್ನೂ ಓದಿ: ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ
ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಪ್ರತಿಭಟನೆ ಮಾಡಿದರು, ಹೋರಾಟ ಮಾಡುತ್ತೇವೆ ಎಂದರು. ಅವರು ಹೋರಾಟ ಮಾಡಲಿ ನಾನು ಬೇಡ ಎನ್ನುವುದಿಲ್ಲ. ಆದರೆ ನಾನು ಈಡೀ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿಲ್ಲ. ಕೇವಲ ಹರಿಪ್ರಸಾದ್ ವಿರುದ್ಧ ಅಷ್ಟೇ ಮಾತನಾಡಿದ್ದೇನೆ. ಪ್ರಧಾನಿ ಬಗ್ಗೆ ಮಾತನಾಡಿದ ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ಏನು ಕ್ರಮ ಕೈಗೊಳ್ಳುತ್ತದೆ? ಅವರ ಮಾತಿನ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.