ಉಡುಪಿ: ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಆಗಿರುವುದನ್ನು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿರುವುದು ಗಮನಕ್ಕೆ ಬಂತು. ಆಕ್ಷೇಪ ಇರುವ ದೃಶ್ಯಗಳಿಗೆ ಕತ್ತರಿ ಹಾಕುವ ಮಾಹಿತಿಯೂ ಸಿಕ್ಕಿದೆ. ಸಮಾಜದಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಇಂತಹ ಕೃತ್ಯಗಳಿಗೆ ಕೈಹಾಕಬಾರದು. ಒಂದು ಸಮಾಜವನ್ನು ಕೆಣಕಿ, ಹಳಿದು ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ ಎಂದರು.
ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಯಾರೂ ಮಾಡಬೇಡಿ. ಎಲ್ಲರೂ ಒಂದು ಸಮಾಜದಲ್ಲಿ ಬದುಕುತ್ತಿರುವಾಗ ಇಂತಹ ಕೃತ್ಯಗಳು ನಡೆಯಬಾರದು. ಹೊಂದಾಣಿಕೆಯಿಂದ ಬದುಕಬೇಕು ಎಂದರು. ಈ ಮೂಲಕ ಪೊಗರು ಚಿತ್ರ ತಂಡಕ್ಕೆ ಪೇಜಾವರಶ್ರೀ ಎಚ್ಚರಿಕೆ ನೀಡಿದರು.