ಚೆನ್ನೈ: ಅವಳಿ ಸಹೋದರರಿಬ್ಬರು ತಳ್ಳುವ ಗಾಡಿಯಲ್ಲಿ 70 ವರ್ಷದ ವೃದ್ಧೆಯನ್ನು ಮಲಗಿಸಿಕೊಂಡು ಪಡಿತರ ಅಂಗಡಿಗೆ ಕರೆದುಕೊಂಡು ಹೋಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪೊಂಗಲ್ ಪ್ರಯುಕ್ತ ತಮಿಳುನಾಡು ಸರ್ಕಾರ ಪಡಿತರ ಅಂಗಡಿಗಳ ಮೂಲಕವಾಗಿ 2,500 ರೂಪಾಯಿ, ಕಬ್ಬು, ಬಟ್ಟೆಗಳನ್ನು ನೀಡುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರಿಗೆ ಅಂಡಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರು ಬಾಲಕರು ವೃದ್ಧೆಗೆ ಸಹಾಯ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮಾನಸಿಕ ಅಸ್ವಸ್ಥೆ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿರುವ 70ರ ವೃದ್ಧೆಗೆ ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆದುಕೊಳ್ಳುವ ಅನಿವಾರ್ಯತೆ ಇತ್ತು. ಆದರೆ ವೃದ್ಧೆಗೆ ಪಡಿತರ ಅಂಗಡಿಗೆ ನಡೆದುಕೊಂಡು ಹೋಗುವಷ್ಟು ಶಕ್ತಿ ಇರಲಿಲ್ಲ. ತೀರಾ ಅನಾರೋಗ್ಯದ ನಡುವೆಯೂ ವೃದ್ಧೆ ನಡೆದುಕೊಂಡು ಹೊರಟಿದ್ದಾರೆ. ಆದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಸಾಧ್ಯವಾಗದೆ ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದನ್ನು ಅಲ್ಲೇ ಆಟವಾಡುತ್ತಿದ್ದ ಇಬ್ಬರು ಬಾಲಕರು ಗಮನಿಸಿದ್ದಾರೆ.
9 ವರ್ಷ ವಯಸ್ಸಿನ ಅವಳಿ ಸಹೋದರರಾದ ನಿತಿನ್ ಮತ್ತು ನಿತೀಶ್ ಇಬ್ಬರು ಅಜ್ಜಿಯನ್ನು ನೋಡಿ ಮರುಗಿದ್ದಾರೆ. ಜೊತೆಗೆ ಅಜ್ಜಿಗೆ ಅಲ್ಲಿಯೇ ಕೂತು ಸುಧಾರಿಸಿಕೊಳ್ಳಲು ಹೇಳಿದ್ದಾರೆ. ಇಬ್ಬರು ಸಹೋದರರು ಸೇರಿ ತಳ್ಳುವ ಗಾಡಿಯೊಂದನ್ನು ತಂದು ಅದರಲ್ಲಿ ಅಜ್ಜಿಯನ್ನು ಮಲಗಿಸಿ ಗಾಡಿಯನ್ನು ತಳ್ಳುತ್ತಾ ಪಡಿತರ ಅಂಗಡಿಗೆ ಕರೆದುಕೊಂಡು ಹೋಗಿ ಅಜ್ಜಿಗೆ ಪೊಂಗಲ್ ಪ್ರಯುಕ್ತ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯಲು ಸಹಾಯ ಮಾಡಿದ್ದಾರೆ. ಈ ಬಾಲಕರು ಮಾಡಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮತ್ತು ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.