ಮೈಸೂರು: ಅವನ್ಯಾರೋ ಹೊಸ ಆಹಾರ ಮಂತ್ರಿ ಬಂದಿದ್ದಾನೆ. ಅದೆಂತೋ ಕತ್ತಿಯಂತೆ ನಂಗೊತ್ತಿಲ್ಲ ಅದ್ಯಾವ ಕತ್ತಿ ಅವನು ಅಂತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಗಂಧನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನಿಗೇನು ಕಾಮನ್ ಸೆನ್ಸ್ ಇದ್ಯಾ. ಟಿವಿ, ಸ್ಕೂಟರ್, ಫ್ರಿಡ್ಜ್ ಇದ್ದವರ ಮನೆಗೆ ಬಿಪಿಎಲ್ ಕಾರ್ಡ್ ಕೊಡೊಲ್ಲ ಅಂತಾನೆ. ಎರಡೂವರೆಯಿಂದ ಮೂರು ಸಾವಿರ ಕೊಟ್ರೆ ಒಂದು ಟಿವಿ ಬರುತ್ತೆ. ಅದಕ್ಕೂ ಇಎಂಐ ಕೊಡ್ತಾರೆ. ಇಎಂಐನಲ್ಲಿ ಟಿವಿ ತಗೋತಾರಪ್ಪ ಅದಕ್ಕೆ ಕಾರ್ಡ್ ನಿಲ್ಲಿಸೋದಾ?. ಯಾರಯ್ಯ ಅವನು ಎಂದು ವೇದಿಕೆ ಮೇಲಿದ್ದ ಆರ್.ಶಂಕರ್ ರನ್ನ ಪ್ರಶ್ನಿಸಿದರು.
ನನಗೆ ಬೇಸರವಾಗಿದ್ದು ನಾನು 7 ಕೆಜಿ ಅಕ್ಕಿ ಕೊಟ್ಟಿದ್ದನ್ನ ಈಗ 3 ಕೆಜಿಗೆ ಇಳಿಸಿದ್ದಾರೆ. ಯಾಕಪ್ಪ ಅಂತ ಕೇಳಿದ್ರೆ ಕೊರೊನಾ ಸರ್ ಅಂತಾರೆ. ಕೊರೊನಾಗೂ ಅಕ್ಕಿ ಕೊಡೋಕು ಏನ್ ಸಂಬಂಧ..?, ಅದಕ್ಕೆ ಇನ್ನೆರಡು ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೀವಿ. ಆಗ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡ್ತೀನಿ. ಅದೆಷ್ಟು ಹಣ ಖರ್ಚಾದ್ರು ಪರವಾಗಿಲ್ಲ ಎಂದರು.
ವಿಜಯಶಂಕರ್ ಕೇಳಿಸಿಕೊಳ್ಳಿ ಹಣ ಮುಖ್ಯವಲ್ಲ ರೀ. ಜನರಿಗೆ ಅಕ್ಕಿ ಕೊಡೋದು ಮುಖ್ಯ. ನಾವು ಮುಂದಿನ ಬಾರಿ ಅಧಿಕಾರಕ್ಕೆ ಬರೋದು ಗ್ಯಾರೆಂಟಿ. ಆಗ ಈ ಊರಿಗೆ ಬೇಕಾದ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡ್ತೀವಿ. ನಾನೇ ಬಂದು ಎಲ್ಲ ರೀತಿಯ ಸಹಾಯ ಮಾಡ್ತೀನಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.