ಅಳಿವಿನಂಚಿನಲ್ಲಿರುವ ಪೆಸಿಫಿಕ್ ರಿಡ್ಲೆ ಕಡಲಾಮೆ ಕಳೇಬರಹ ಪತ್ತೆ

Public TV
2 Min Read
pacific sea turtley copy

– ಸಮುದ್ರ ಕಲ್ಮಶ ಶುದ್ಧೀಕರಿಸುತ್ತೆ ಈ ಆಮೆ

ಕಾರವಾರ: ಅಳಿವಿನಂಚಿನಲ್ಲಿರುವ ಪೆಸಿಫಿಕ್ ರಿಡ್ಲೆ ಕಡಲಾಮೆಯೊಂದು ಮೀನುಗಾರರು ಬೀಸಿದ ಬಲೆಗೆ ಸಿಲುಕಿ ಮೃತಪಟ್ಟಿದ್ದು, ಕಾರವಾರದ ಕೋಡಿಭಾಗ್ ಬ್ರಿಡ್ಜ್ ಬಳಿ ಇದರ ಕಳೇಬರಹ ಪತ್ತೆಯಾಗಿದೆ.

olive ridley sea turtle 1280x720 copy

ಸಮುದ್ರದ ಕಲ್ಮಶಗಳನ್ನು ಶುದ್ಧೀಕರಿಸುವ ಫಿಲ್ಟರ್ ಎಂದೇ ಕರೆಯುವ ಈ ಆಮೆಗಳು ಭಾರತದ ಕರಾವಳಿ ಉದ್ದಕ್ಕೂ ಕಂಡುಬರುತ್ತವೆ. ಒರಿಸ್ಸಾ ಕಡಲ ಭಾಗದಲ್ಲಿ ಅತಿ ಹೆಚ್ಚು ಇದರ ಸಂತತಿ ಉಳಿದಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇದರ ಸಂತತಿ ಕ್ಷೀಣವಾಗಿದ್ದು, ಇದನ್ನು ಲೆಪಿಡೊಕೆಲಿಸ್ ಓಲಿವೆಸಿ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಐಸಿಯುಎನ್(ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್) ಪ್ರಕಾರ ಈ ಕಡಲಾಮೆ ಸಂತತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ.

OLIVE RIDLEY TURTLES

ಹೆಚ್ಚಾಗಿ ಸಮಶೀತೋಷ್ಣ ವಲಯದ ಸಮುದ್ರದಲ್ಲಿ ವಾಸಿಸುವ ಈ ಆಮೆಗಳು, 2 ರಿಂದ 2.5 ಅಡಿಯಷ್ಟು ದೊಡ್ಡದಾಗಿ ಬೆಳೆಯುತ್ತವೆ. ಇವು 150 ಮೀಟರ್ ನಷ್ಟು ಆಳದವರೆಗೂ ವಾಸಿಸಬಲ್ಲವು. ಇವುಗಳ ಜೀವಿತಾವಧಿ 50 ರಿಂದ 60 ವರ್ಷಗಳಷ್ಟಿದ್ದು, ಪ್ರತಿ ಹದಿನೈದು ನಿಮಿಷಕ್ಕೆ ಸಮುದ್ರದಾಳದಿಂದ ಹೊರಬಂದು ಉಸಿರಾಟಕ್ಕೆ ಆಮ್ಲಜನಕವನ್ನು ತೆಗೆದುಕೊಳ್ಳುತ್ತವೆ. ಸಮುದ್ರದಲ್ಲಿ ಜಲ್ಲಿ ಫಿಷ್ ಗಳು ಸತ್ತ ಸಮುದ್ರ ಜೀವಿಗಳ ಕಳೆಬರಹ ಹಾಗೂ ಕೆಲವೊಮ್ಮೆ ಚಿಕ್ಕಪುಟ್ಟ ಮೀನುಗಳನ್ನು ಭಕ್ಷಿಸುವ ಇವು, ಸಮುದ್ರದ ಕಲ್ಮಶವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತವೆ. ಗಾತ್ರದಲ್ಲಿ ಚಿಕ್ಕದಿರುವ ಈ ಆಮೆಗಳು ಕಡಲ ದಂಡೆಯಲ್ಲಿ 100 ರಿಂದ 150 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ ಎಂದು ಟೆರ್ರಾ ಸಾಗರ ಸಂಶೋಧನಾ ಸಂಸ್ಥೆಯ ಸಮುದ್ರ ಆಮೆಗಳು ಮತ್ತು ಕರಾವಳಿ ಸಂಪನ್ಮೂಲಗಳ ಸಹ ಸಂಸ್ಥಾಪಕ ಮತ್ತು ಕಾರ್ಯಕ್ರಮ ನಿರ್ದೇಶಕ ಕಡಲ ಜೀವ ವಿಜ್ಞಾನಿ ಡಾ.ಅನ್ನಿ ಕುರಿಯನ್ ತಿಳಿಸಿದ್ದಾರೆ.

XL 279130whatwwf copy

ಮೀನುಗಾರಿಕೆ ಅವೈಜ್ಞಾನಿಕ ಕ್ರಮದಿಂದ ಆಮೆ ಸಂತತಿ ಕ್ಷೀಣ
ಕರ್ನಾಟಕದ ಕರಾವಳಿ ಭಾಗದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಆಮೆಗಳ ಸಂತತಿಗೆ ಹೊಡೆತ ಕೊಡುತ್ತಿದೆ. ಸಮುದ್ರಭಾಗದಲ್ಲಿ ಮೀನುಗಾರಿಕೆ ನಡೆಸುವಾಗ ಹಾಳಾದ ಬಲೆಗಳನ್ನು ಸಮುದ್ರದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಸಮುದ್ರದಾಳದಿಂದ ಉಸಿರಾಟಕ್ಕೆ ಮೇಲೆಬರುವ ಈ ಆಮೆಗಳು ಬಲೆಗಳಿಗೆ ಸಿಲುಕಿ ಮೃತಪಡುತ್ತಿವೆ. ಇದಲ್ಲದೆ ಇವುಗಳ ಭಕ್ಷಣೆ ಸಹ ಮಾಡಲಾಗುತಿದ್ದು, ಇದು ಸಹ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ. ಅರಣ್ಯ ಇಲಾಖೆ ಇವುಗಳ ಭಕ್ಷಣೆಗೆ ನಿಷೇಧ ಹೇರಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇವುಗಳ ಭಕ್ಷಣೆ ನಡೆಯುತಿದ್ದು, ಸಂತತಿ ಕ್ಷೀಣಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *