ಬೆಂಗಳೂರು: ಅಲ್ಲಾ ಎಲ್ಲವನ್ನೂ ಕೊಡ್ತಾನೆ ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೌಲ್ವಿಗಳು ಧೈರ್ಯ ತುಂಬಿದ್ದಾರೆ.
ಗಲಭೆಯಿಂದ ಹೊತ್ತಿ ಉರಿದ ಶಾಸಕರ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ಮೌಲ್ವಿಗಳು ಭೇಟಿ ನೀಡಿ ವೀಕ್ಷಿಸಿದರು.
ಹೊತ್ತಿ ಉರಿದ ಮನೆಯನ್ನು ಅಖಂಡ ತೋರಿಸುವ ಸಂದರ್ಭದಲ್ಲಿ ಮೌಲ್ವಿ ಇರ್ಷಾದ್ ಅಹಮ್ಮದ್, ಅಖಂಡ ಶ್ರೀನಿವಾಸ್ ನಮಗೆ ಮನೆ ಮಗ ಇದ್ದಂತೆ. ಎಲ್ಲಾ ಮಸೀದಿಗಳು ನಿಮ್ಮ ಜೊತೆ ಇರುತ್ತದೆ. ಅಲ್ಲಾ ಎಲ್ಲವನ್ನೂ ಕೊಡುತ್ತಾನೆ. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?
ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ಮನೆ ಕಟ್ಟಿಸಿಕೊಡುವುದಾಗಿ ಧರ್ಮಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಾವು ಸ್ವಂತ ಹಣ ದಿಂದ ಮನೆ ಕಟ್ಟಿಸಿಕೊಡೊದಾಗಿ ಹೇಳಿದ್ದಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಅಖಂಡ, ಮನೆಯನ್ನು ನಾನೇ ನಿರ್ಮಿಸುತ್ತೇನೆ. ಗುರುಗಳ ಆಶೀರ್ವಾದ ಸದಾ ಇರಲಿ. ನಾವೇ ಹೋಗಿ ಮಾತನಾಡಿಕೊಂಡು ಬರಬೇಕಾಗಿತ್ತು. ಗುರುಗಳೇ ಬಂದು ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ದೂರಿನಲ್ಲಿ ಯಾರ ಹೆಸರನ್ನು ಹೇಳಿಲ್ಲ. ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದು ತಿಳಿಸಿದ್ದರು.