ಮಂಡ್ಯ: ಜಿಲ್ಲೆಯ ಪ್ರಸಿದ್ಧ ಮುಳಕಟ್ಟಮ್ಮ ದೇವಾಲಯದ ಅರ್ಚಕರ ಎರಡು ಗುಂಪಿನ ಮಧ್ಯೆ ಜಗಳ ಏರ್ಪಟ್ಟಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲುಪಿದೆ. ಹೀಗಾಗಿ ಟ್ರಸ್ಟ್ ದೇವಸ್ಥಾನಕ್ಕೆ ಬೀಗ ಹಾಕಿದೆ. ಇದರಿಂದಾಗಿ ಭಕ್ತರಿಗೆ ದೇವಿ ದರ್ಶನ ಇಲ್ಲದಂತಾಗಿದ್ದು, ಹೊರಗಿನಿಂದಲೇ ಪೂಜೆ ಸಲ್ಲಿಸುತ್ತಿದ್ದಾರೆ.
Advertisement
ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳಕಟ್ಟೆ ಗ್ರಾಮದಲ್ಲಿನ ಮುಳಕಟ್ಟಮ್ಮ ದೇವಾಲಯ ಸಕ್ಕರೆ ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ದೇಗುಲದಲ್ಲಿ ನೆಲೆಸಿರುವ ಮುಳಕಟ್ಟಮ್ಮ ದೇವಿ ಭಕ್ತರ ಪಾಲಿನ ಪವರ್‍ಫುಲ್ ಶಕ್ತಿ ದೇವತೆ. ಈ ದೇಗುಲದಲ್ಲಿ ಪ್ರತಿ ಭಾನುವಾರ, ಮಂಗಳವಾರ, ಶುಕ್ರವಾರದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಬೆಂಗಳೂರು, ಮೈಸೂರು, ತುಮಕೂರು, ಕೋಲಾರ ಸೇರಿದಂತೆ ನಾಡಿನ ನಾನಾ ಭಾಗಗಳಿಂದ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ, ಸೇವೆ ಸಲ್ಲಿಸಿ, ಹರಕೆ ಪೂರೈಸುತ್ತಾರೆ. ಆದರೆ 24 ದಿನಗಳಿಂದ ದೇವಾಲಯಕ್ಕೆ ಬೀಗ ಹಾಕಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ದೇಗುಲದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಅರ್ಚಕರ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ, ಘರ್ಷಣೆ ಹಿಂದಿನಿಂದಲೂ ನಡೆಯುತ್ತಿತ್ತು. ಈ ಸಂಬಂಧ ಒಂದು ಗುಂಪು ನ್ಯಾಯಾಲಯದ ಮೊರೆ ಹೋಗಿತ್ತು. ಆದೇಶ ಸಹ ಅವರ ಪರವಾಗಿಯೇ ಬಂದಿತ್ತು. ನ್ಯಾಯಾಲಯದ ಆದೇಶದಂತೆ ಮಾರ್ಚ್ 16ರಂದು ಅರ್ಚಕರು ದೇಗುಲ ಪ್ರವೇಶ ಮಾಡಿದಾಗ ಮತ್ತೊಂದು ಗುಂಪು ಅಡ್ಡಿಪಡಿಸಿದೆ. ಈ ವೇಳೆ ಎರಡೂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿ, ಪರಿಸ್ಥಿತಿ ಕೈ ಮೀರುವ ಹಂತ ತಲುಪಿತ್ತು. ಕೊನೆಗೆ ಆಡಳಿತ ಮಂಡಳಿ ದೇವಾಲಯಕ್ಕೆ ಬೀಗ ಜಡಿದಿದೆ.
Advertisement
24 ದಿನಗಳಿಂದ ದೇವಾಲಯಕ್ಕೆ ಬೀಗ ಜಡಿದಿರುವುದರಿಂದ ಭಕ್ತರು ದೇವಾಲಯದ ಹೊರ ಭಾಗದಲ್ಲೇ ಪೂಜೆ ಸಲ್ಲಿಸುತ್ತಿದ್ದು, ದೇವಿಯ ದರ್ಶನ ಮಾಡಲಾಗದೆ ಬೇಸರದಿಂದಲೇ ಹೋಗುತ್ತಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಪ್ರಶ್ನೆ ಮಾಡಿದರೆ, ಅರ್ಚಕರ ನಡುವಿನ ವಿವಾದ ಭಕ್ತರ ಮನಸ್ಸಿನಲ್ಲಿ ಮತ್ತೊಂದು ಅಭಿಪ್ರಾಯ ಮೂಡಬಾರದೆಂದು ಬೀಗ ಹಾಕಿದ್ದೇವೆ. ಹೈಕೋರ್ಟ್ ನಲ್ಲಿ ಈ ಬಗ್ಗೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದ ಆದೇಶ ಪಾಲಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.