ಗುವಾಹಟಿ: ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಅರುಣಾಚಲ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಬಣ್ಣದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ನವೆಂಬರ್ 16ರಿಂದ ಶಾಲೆಗಳು ಆರಂಭವಾಗಲಿದ್ದು, ಹೀಗಾಗಿ ಸಾವಿರಾರು ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.
ಈ ಕುರಿತು ಅರುಣಾಚಲ ಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ 16ರಿಂದ 10ನೇ ತರಗತಿ ಹಾಗೂ 12 ತರಗತಿ ಶಾಲೆ, ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಭಾಗವಾಗಿ ಖಾದಿ ಆ್ಯಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್(ಕೆವಿಐಸಿ)ನಿಂದ 60 ಸಾವಿರ ಖಾದಿ ಬಟ್ಟೆಯ ಮಾಸ್ಕ್ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಕೊರೊನಾ ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ಶಾಲೆಗೆ ಮರಳಿದ ಬಳಿಕ ಸಾವಿರಾರು ಮಕ್ಕಳು ತ್ರಿವರ್ಣದ ಮಾಸ್ಕ್ ಧರಿಸಲಿದ್ದಾರೆ ಎಂದು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ ತಿಳಿಸಿದೆ. ಕೆವಿಐಸಿ ಈಗಾಗಲೇ ಸರ್ಕಾರಕ್ಕೆ ಮಾಸ್ಕ್ ಪೂರೈಸಿದ್ದು, ಇನ್ನು ಕೇವಲ 6 ದಿನಗಳಲ್ಲಿ ಮಾಸ್ಕ್‍ಗಳನ್ನು ಮಕ್ಕಳಿಗೆ ನೀಡಬೇಕಿದೆ.
ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಉದ್ದೇಶದಿಂದ ತ್ರಿವರ್ಣದ ಮಾಸ್ಕ್‍ಗಳನ್ನು ವಿತರಿಸಲಾಗುತ್ತಿದೆ. ಎಲ್ಲ ಮಾಸ್ಕ್‍ಗಳನ್ನು ಕೆವಿಐಸಿ ಉತ್ಪಾದಿಸಲಿದೆ. ಡಬಲ್ ಟ್ವಿಸ್ಟೆಡ್ ಖಾದಿ ಬಟ್ಟೆಯಿಂದ ಮಾಸ್ಕ್ ತಯಾರಿಸಲಾಗಿದೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಸಹ ಕಾಡುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಮಾಹಿತಿ ನೀಡಿದೆ.