ಹಾಸನ: ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಗಿಟ್ಟಿಸಿಕೊಳ್ಳಲೇಬೇಕು ಎಂದು ಎನ್.ಆರ್ ಸಂತೋಷ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯ್ತಿ ಅಧ್ಯಕ್ಷರಾದ ಮರಿಸ್ವಾಮಿ ನಡುವೆ ಈಗಿನಿಂದಲೇ ಬಿಗ್ ಫೈಟ್ ಶುರುವಾಗಿದೆ.
ಇಬ್ಬರೂ ಕೂಡ ಬಿಎಸ್‍ವೈ ಆಪ್ತವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅರಸೀಕೆರೆ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದೆ. ಈಗ ಪ್ರಸ್ತುತ ಜೆಡಿಎಸ್‍ನ ಶಿವಲಿಂಗೇಗೌಡ ಇಲ್ಲಿನ ಶಾಸಕರಾಗಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ 80 ಸಾವಿರಕ್ಕೂ ಹೆಚ್ಚು ಲಿಂಗಾಯಿತ ಮತಗಳಿದ್ದು ಅದರ ಮೇಲೆ ಕಣ್ಣಿಟ್ಟಿರುವ ಸಂತೋಷ ಮತ್ತು ಮರಿಸ್ವಾಮಿ ಈಗಿನಿಂದಲೇ ಅರಸೀಕೆರೆ ಕ್ಷೇತ್ರದಲ್ಲಿ ಆಗಾಗ ಸಭೆ ನಡೆಸುತ್ತ ಓಡಾಟ ಶುರುಮಾಡಿದ್ದಾರೆ. ಇತ್ತ ಅರಸೀಕೆರೆಯ ವೀರಶೈವ ಸೇನೆ ಸಂಘಟನೆಯ ಅಧ್ಯಕ್ಷ ಸಿಎಂಗೆ ಪತ್ರ ಬರೆದಿದ್ದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮರಿಸ್ವಾಮಿ ಮತ್ತೆ ಅಭ್ಯರ್ಥಿ ಆಗೋದು ಬೇಡ. ನಮ್ಮ ತಾಲೂಕಿನ ಅಳಿಯ ಸಂತೋಷ್ ಅವರೇ ಅರಸೀಕೆರೆ ಕ್ಷೇತ್ರಕ್ಕೆ ಮುಂದಿನ ಬಿಜೆಪಿ ಅಭ್ಯರ್ಥಿ ಆಗಲಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಎನ್‍ಆರ್.ಸಂತೋಷ್ ಅರಸೀಕೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ, ನಾನು ಅರಸೀಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದೇನೆ. ಚುನಾವಣೆ ಆದ ನಂತರವೂ ಇಲ್ಲಿ ಬಂದು ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಸಂತೋಷ್ ಇಲ್ಲಿಗೆ ಬಂದಿರೋದು ಕೇವಲ ಪಕ್ಷ ಸಂಘಟನೆಗೆ. ಕಾರ್ಯಕರ್ತರಲ್ಲಿ ಈ ಬಗ್ಗೆ ಗೊಂದಲ ಇರಬಹುದು. ಆದರೆ ಮುಂದಿನ ಬಾರಿಯೂ ನಾನೇ ಅಭ್ಯರ್ಥಿ ಆಗಲಿದ್ದೇನೆ ಅಂದಿದ್ದಾರೆ. ಅಷ್ಟೆ ಅಲ್ಲದೆ ಸಂತೋಷ್ ಅವರು ಇಲ್ಲಿಯ ಅಳಿಯ ಅನ್ನೋದಾದ್ರೆ, ನನಗೂ ಇಲ್ಲಿ ಬಹಳಷ್ಟು ಜನ ನೆಂಟರಿದ್ದಾರೆ ಅಂತ ಪರೋಕ್ಷವಾಗಿ ಸಂತೋಷ್‍ಗೆ ಟಾಂಗ್ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಗೋಪಾಲಯ್ಯ ಇದು ಪಕ್ಷದ ಆಂತರಿಕ ವಿಚಾರ ಅಂತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕೆಲ ದಿನಗಳ ಹಿಂದೆ ಅರಸೀಕೆರೆಯಲ್ಲಿ ಸಂತೋಷ್ ಹುಟ್ಟುಹಬ್ಬಕ್ಕೆ ಶುಭಕೋರಿ ಹಾಕಲಾಗಿದ್ದ ಫ್ಲೆಕ್ಸ್ ಅನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ರು. ಇದರ ಹಿಂದೆ ಮರಿಸ್ವಾಮಿ ಕೈವಾಡ ಇದೆ ಎಂಬ ಊಹಾಪೋಹ ಕೂಡ ಶುರುವಾಗಿತ್ತು. ಏನೇ ಊಹಾಪೋಹಗಳಿರಲಿ. ತಮ್ಮ ಆಪ್ತರ ನಡುವೆಯೇ ಇದೀಗ ಕಿತ್ತಾಟ ಶುರುವಾಗಿರೋದು ಬಿಎಸ್‍ವೈಗೆ ಹೊಸ ತಲೆನೋವು ತಂದಿದೆ ಅಂತ ಹಾಸನ ಬಿಜೆಪಿ ವಲಯದಲ್ಲಿ ಚರ್ಚೆ ಜೋರಾಗಿ ಶುರುವಾಗಿರೋದಂತು ಸುಳ್ಳಲ್ಲ.