ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಅತಿ ಸರಳವಾದರೂ ಕೂಡ ಸಂಭ್ರಮದಿಂದ ಮಾಡುವುದಕ್ಕೆ ಅರಮನೆ ಆಡಳಿತ ಮಂಡಳಿ ಸಿದ್ಧವಾಗುತ್ತಿದೆ.
ಅರಮನೆ ಅಂಗಳಕ್ಕೆ ಅ.2 ರಂದು ಐದು ಆನೆಗಳು ಬರಲಿವೆ. ಆನೆಗಳ ತಾಲೀಮಿಗೆ ಅರಮನೆ ಒಳ ಆವರಣದಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿದೆ. ಈ ಮೂಲಕ ಆನೆಯ ತಾಲೀಮು ಹಾಗೂ ಕೋವಿಡ್ ಎಚ್ಚರಿಕೆಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧತೆ ನಡೆದಿದೆ.
ಈ ಬಾರಿಯ ದಸರಾ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ನಡೆಯಲಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಬರುವ ಐದು ಆನೆಗಳಿಗೆ ವಾಕಿಂಗ್ ಎಲ್ಲವು ಅರಮನೆ ಆವರಣದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಛತೆ ಹಾಗೂ ಆನೆಗಳ ತಾಲೀಮಿಗೆ ಸಿದ್ಧತೆ ಮಾಡಿಕೊಂಡಿದೆ.
ಅ.2ರಂದು ಮೈಸೂರು ಅರಮನೆಗೆ ಬರುವ ಗಜಪಡೆಗೆ ವಾಕಿಂಗ್ ಮಾಡಲು ಅನುಕೂಲವಾಗುವಂತೆ ಅರಮನೆ ಒಳಗೆ ಕಾಂಕ್ರೀಟ್ ರಸ್ತೆಯನ್ನ ಮಾಡಿಸಲಾಗಿದೆ. ಈಗಾಗಲೇ ಜೆಸಿಬಿ ಮೂಲಕ ಗಿಡಗಂಟೆಗಳ ಶುಚಿತ್ವ ಕಾರ್ಯ ಮಾಡಲಾಗುತ್ತಿದೆ. ಅರಮನೆ ಅಂಗಳಕ್ಕೆ ಆನೆ ಬರುವ ಮುನ್ನವೇ ಅರಮನೆಯಲ್ಲಿ ಆನೆ ಇರಿಸುವ ಸ್ಥಳ, ಸ್ನಾನ ಮಾಡಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡಲಾಗುತ್ತಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಬಳಿಕ ಅರಮನೆಗೆ ಮಾತ್ರ ಸೀಮಿತವಾಗುವ ನಾಡಹಬ್ಬ ದಸರಾ ಕಳೆ ಕಟ್ಟಲು ಅರಮನೆ ಆಡಳಿತ ಮಂಡಳಿ ಸಾಕಷ್ಟು ಕ್ರಮವಹಿಸುತ್ತಿದೆ. ಕೋವಿಡ್‍ನಲ್ಲೂ ಅತಿ ಸರಳ ದಸರಾ ಮಾಡುತ್ತಿರುವ ಸರ್ಕಾರ ಎಲ್ಲಾ ವಿಚಾರಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಎಚ್ಚರವಹಿಸುತ್ತಿದೆ.