ಧಾರವಾಡ: ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆಯಾಗಿದ್ದಾರೆ.
ಜಿಲ್ಲೆಯ ಬೈಚವಾಡ್ ಗ್ರಾಮದ ವೃದ್ಧ ಜನ್ನು ಪಾಂಡ್ರಾಮೀಸೆ 4 ದಿನಗಳ ಕಾಲ ಅರಣ್ಯದಲ್ಲಿದ್ದು, ಇಂದು ಸಿಕ್ಕಿದ್ದಾರೆ. ನಾಲ್ಕು ದಿನಗಳ ಹಿಂದೆ ತಮ್ಮ ಮಗಳ ಮನೆಗೆ ಹೋಗಿ ಬೈಚವಾಡ್ ಗ್ರಾಮಕ್ಕೆ ವಾಪಸ್ ಬರುವಾಗ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದರು. ನಂತರ ಗ್ರಾಮಸ್ಥರು ಸಾಕಷ್ಟು ಹುಡುಕಾಟ ನಡೆಸಿ, ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿದ್ದರು. ಇಂದು ಬೆಳಗಿನ ಜಾವ ಬೈಚವಾಡ್ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದ ಅರಣ್ಯದಲ್ಲಿರುವ ಕೆರೆ ಬಳಿ ವೃದ್ಧ ಸಿಕ್ಕಿದ್ದಾರೆ.
Advertisement
Advertisement
ಇದೀಗ ವೃದ್ಧ ಜನ್ನು ಪಾಂಡ್ರಾಮೀಸೆಯವರನ್ನು ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಗ್ರಾಮಕ್ಕೆ ಕರೆ ತಂದಿದ್ದು, ಅವರಿಗೆ ಸನ್ಮಾನ ಕೂಡ ಮಾಡಿದ್ದಾರೆ. ವೃದ್ಧ ಕಾಣೆಯಾದ ನಂತರ ಊಟ, ನೀರು ಸಹ ಇಲ್ಲದೆ ನಾಲ್ಕು ದಿನ ಅರಣ್ಯದಲ್ಲಿ ಕಳೆದಿದ್ದಾರೆ. ವೃದ್ಧನಿಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಇಂದು ಪೊಲೀಸರ ಸಹಾಯ ಪಡೆದು ಶ್ವಾನ ದಳದಿಂದ ಹುಡುಕಾಟ ನಡೆಸುವವರಿದ್ದರು. ಆದರೆ ಇಂದು ಕೆರೆಯ ಬಳಿ ಪತ್ತೆಯಾಗಿದ್ದಾರೆ.
Advertisement
Advertisement
ಗವಳಿ ಜನಾಂಗಕ್ಕೆ ಸೇರಿದ ಜನ್ನು ಅವರ ಮಗ ಸಹ 80 ವರ್ಷದವರಿದ್ದಾರೆ. ಈ ಜನಾಂಗದವರು ಜಾನುವಾರು ಸಾಕಿಯೇ ಜೀವನ ನಡೆಸುತ್ತ ಬಂದಿದ್ದಾರೆ. ಸುಮಾರು 80 ವರ್ಷಗಳಿಂದ ಇವರು ಅರಣ್ಯದಲ್ಲೇ ವಾಸವಾಗಿದ್ದವರು. ಸದ್ಯ ವೃದ್ಧ ಸಿಕ್ಕಿದ್ದಕ್ಕೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.