ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಯಲಿದೆ. ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.
ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.
ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ
ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.