ಮಡಿಕೇರಿ : ಅಯೋಧ್ಯೆಯಲ್ಲಿ ಆಗಸ್ಟ್ 05 ರಂದು ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜಾ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ಹಾಗೆಯೇ ಕೋವಿಡ್-19 ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಯಂತೆ ಹಲವು ನಿರ್ಬಂಧಗಳನ್ನು ಪಾಲಿಸಬೇಕಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್ ಆಕ್ಟ್ 1963ರ ಕಲಂ 35ರಡಿ ದತ್ತವಾದ ಅಧಿಕಾರದಂತೆ ಆಗಸ್ಟ್, 05 ರ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
Advertisement
ನಿಷೇಧಿತ ಅವಧಿಯಲ್ಲಿ ಪಾಲಿಸಬೇಕಾದ ಷರತ್ತುಗಳು:
1. ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶ ಮುಂತಾದ ಸಮಾರಂಭಗಳು ಮತ್ತು ಪೂಜಾ ಮಂದಿರ, ಮಸೀದಿಗಳಲ್ಲಿ ನಡೆಯುವ ಪ್ರತಿನಿತ್ಯದ ಪ್ರಾರ್ಥನೆ ಹೊರತುಪಡಿಸಿ, ಉಳಿದಂತೆ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ.
Advertisement
2. ಎಲ್ಲಾ ಸಾರ್ವಜನಿಕ/ ರಾಜಕೀಯ ಬಹಿರಂಗ ಸಭೆ-ಸಮಾರಂಭ, ಪ್ರಚೋದನಾಕಾರಿ ಹೇಳಿಕೆ/ ಘೋಷಣೆ, ಕಪ್ಪು ಬಾವುಟ/ ಕಪ್ಪು ಪಟ್ಟಿ ಪ್ರದರ್ಶನ, ಭಾಷಣ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತಾ-ರೋಕಾ, ಮುತ್ತಿಗೆ, ಪಟಾಕಿ ಸಿಡಿಸುವುದು ಹಾಗೂ ಕೋಮು ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ವಿಜಯೋತ್ಸವ ಮತ್ತು ಕರಾಳ ದಿನ ಆಚರಣೆಯನ್ನು ನಿಷೇಧಿಸಿದೆ.
Advertisement
Advertisement
3. ಯಾವುದೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರ ಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ರೀತಿಯ ಮತೀಯ ಪ್ರಚೋದನಾತ್ಮಕ ಧ್ವಜ/ ಫಲಕ/ ಬಾವುಟಗಳ ಪ್ರದರ್ಶನ ಮತ್ತು ಬಳಕೆಯನ್ನು ನಿಷೇಧಿಸಿದೆ.
4. ನಿಷೇಧಿತ ಅವಧಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್/ ಎಟಿಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳನ್ನು ಹೊರತುಪಡಿಸಿ, ಯಾರೇ ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ ಹತ್ಯಾರುಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.