ಇದು ಮನಸು ಬೆಚ್ಚಗಾಗಿಸೋ ಮಾಧುರ್ಯದ ಆಲ್ಬಂ ಸಾಂಗ್!
ಕನ್ನಡದಲ್ಲಿ ಅಮ್ಮನ ಕುರಿತಾಗಿ ಬಂದ ಹಾಡುಗಳ ಸಂಖ್ಯೆ ಸಾಕಷ್ಟಿದೆ. ಭಾವಗೀತೆ, ಸಿನಿಮಾ ಗೀತೆಗಳೂ ಸೇರಿದಂತೆ ತಾಯಿಯ ಬಗ್ಗೆ ಸೃಷ್ಟಿಯಾದ ಹಾಡುಗಳೆಲ್ಲವೂ ಗೆದ್ದಿವೆ. ಎವರ್‍ಗ್ರೀನ್ ಅಂತಲೂ ಅನ್ನಿಸಿಕೊಂಡು ಸದಾ ಗುನುಗುನಿಸಿಕೊಳ್ಳುತ್ತಿವೆ. ಆ ಸಾಲಿನಲ್ಲಿ ನಿಸ್ಸಂದೇಹವಾಗಿ ಸೇರ್ಪಡೆಗೊಳ್ಳುವ ಎಲ್ಲ ಕ್ವಾಲಿಟಿಯನ್ನೂ ಒಳಗೊಂಡಿರೋ ಆಲ್ಬಂ ಸಾಂಗ್ ‘ತಾಯಿ’. ಶ್ವೇತಾ ದೇವನಹಳ್ಳಿ ಹಾಡಿರೋ ಈ ಆಲ್ಬಂ ಸಾಂಗ್ ಅವರದ್ದೇ ಅಫಿಶಿಯಲ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಂಡಿದೆ.
Advertisement
ಶ್ವೇತಾ ದೇವನಹಳ್ಳಿ ಮಧುರವಾದ ಕಂಠಸಿರಿಯ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿರೋ ಯುವ ಗಾಯಕಿ. ಕನ್ನಡ ಕೋಗಿಲೆ ಎಂಬ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಪರಿಚಿತವಾಗಿರುವ ಗಟ್ಟಿ ಪ್ರತಿಭೆ. ಎಲ್ಲ ಪ್ರಾಕಾರಗಳ ಹಾಡುಗಳಿಗೂ ಧ್ವನಿ ನೀಡೋ ಛಾತಿಯ ಅವರೀಗ ಕನ್ನಡ ಚಿತ್ರರಂಗದಲ್ಲಿಯೂ ಹಿನ್ನೆಲೆ ಗಾಯಕಿಯಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಅವರ ಸಂಗೀತ ಯಾನಕ್ಕೆ ಹೊಸ ಓಘ ನೀಡುವಂತೆ ತಾಯಿ ಆಲ್ಬಂ ಸಾಂಗ್ ಮೂಡಿ ಬಂದಿದೆ.
Advertisement
‘ಮಡಿಲಲಿ ಮಗುವಿದೆ ಮನದಲಿ ಕನಸು ಮಗುವಿನ ಮೇಲೆ ನಿನಗೆ ಇಲ್ಲ ಮುನಿಸು ಎಂಬಂಥ ಸಮ್ಮೋಹಕ ಸಾಲುಗಳೊಂದಿದೆ ಈ ಆಲ್ಬಂ ಸಾಂಗ್ ಶುರುವಾಗುತ್ತೆ. ಇಂಥಾದ್ದೇ ತೀವ್ರವಾದ ಮಾತೃಪ್ರೇಮ ಸೂಸುವ ಈ ಸಾಲುಗಳನ್ನು ಪುನೀತ್ ಅಗಚಹಳ್ಳಿ ಬರೆದಿದ್ದಾರೆ. ಅದಕ್ಕೆ ಯಶ್ವಂತ್ ಪಿ ಒಂದೇ ಸಲಕ್ಕೆ ಒಳಗಿಳಿಯುವಂಥಾ ಚೆಂದದ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದು ಶ್ವೇತಾ ದೇವನಹಳ್ಳಿ ಧ್ವನಿಯಲ್ಲಿ ಪ್ರತಿಯೊಬ್ಬರ ಮನಸನ್ನೂ ಬೆಚ್ಚಗಾಗಿಸುವಷ್ಟು ಭಾವ ತೀವ್ರತೆಯೊಂದಿಗೆ ಮೂಡಿ ಬಂದಿದೆ.
Advertisement
Advertisement
ಅಮ್ಮನ ಬಗ್ಗೆ ಅದೆಷ್ಟು ಸಾಲುಗಳು ಸೃಷ್ಟಿಯಾದರೂ ಅದರಲೊಂದು ತಾಜಾತನ ಇದ್ದೇ ಇರುತ್ತೆ. ಅದೇ ರೀತಿಯಲ್ಲಿ ಮೂಡಿ ಬಂದಿರೋ ಈ ಆಲ್ಬಂ ಸಾಂಗ್ ಕೊರೋನಾ ಕಾಲವನ್ನು ತಕ್ಕಮಟ್ಟಿಗೆ ಸಹನೀಯವಾಗಿಸುವಂತಿದೆ. ಕನ್ನಡ ಕೋಗಿಲೆ ಶೋನ ನಂತರದಲ್ಲಿ ಶ್ವೇತಾ ದೇವನಹಳ್ಳಿ ಸಿನಿಮಾ ಹಿನ್ನೆಲೆ ಗಾಯನದತ್ತ ಆಸಕ್ತಿ ಹೊಂದಿರುವಂತಿತ್ತು. ಅವರು ಹಾಡಿದ್ದ ಒಂದಷ್ಟು ಗೀತೆಗಳು ಹಿಟ್ ಆಗಿದ್ದವು. ಈ ಕ್ಷಣಕ್ಕೂ ಹಿನ್ನೆಲೆ ಗಾಯಕಿಯಾಗಿ ಬ್ಯುಸಿಯಿರೋ ಶ್ವೇತಾ ತಾಯಿ ಆಲ್ಬಂ ಸಾಂಗ್‍ನ ಮೂಲಕ ಮತ್ತೊಂದು ಹಾದಿಯತ್ತಲೂ ಹೊರಳಿಕೊಂಡಂತಿದೆ. ಒಟ್ಟಾರೆಯಾಗಿ ಈ ಹಾಡು ಅಮ್ಮನ ಬಗ್ಗೆ ಸೃಷ್ಟಿಯಾದ ಚೆಂದದ ಹಾಡುಗಳ ಯಾದಿಯಲ್ಲಿ ಜಾಗ ಪಡೆಯುವಂತಿದೆ.