– ಬಾಲಕಿಗೆ ರಸ್ತೆಯಲ್ಲಿ ರೇಗಿಸ್ತಿದ್ದ ತಾಯಿಯ ಗೆಳೆಯ
ಚಿಕ್ಕಮಗಳೂರು: ಅಮ್ಮನ ಅಕ್ರಮ ಸಂಬಂಧದಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.
ಮೃತಳನ್ನ ಪೂರ್ಣಿಮಾ(16)ಎಂದು ಗುರುತಿಸಲಾಗಿದೆ. ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಳು. ಮೃತ ಪೂರ್ಣಿಮಾ ತಾಯಿ ಲೀಲಾವತಿಗೆ ಅದೇ ಊರಿನ ರಂಗಸ್ವಾಮಿ ಎಂಬವನ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಷಯ ತಿಳಿದು ಮಗಳು ಮನನೊಂದಿದ್ದಳು. ಅಷ್ಟೆ ಅಲ್ಲದೆ ಲೀಲಾವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ರಂಗಸ್ವಾಮಿ, ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗ ರಸ್ತೆಯಲ್ಲಿ ರೇಗಿಸುತ್ತಿದ್ದನಂತೆ. ಇದರಿಂದಲೂ ಪೂರ್ಣಿಮ ಮನನೊಂದಿದ್ದಳು ಎನ್ನಲಾಗಿದೆ.
ದಾರಿಯಲ್ಲಿ ಛೇಡಿಸುತ್ತಿದ್ದ ರಂಗಸ್ವಾಮಿ ಬಗ್ಗೆ ಅಪ್ಪನ ಬಳಿಯೂ ಹೇಳಿದ್ದಳು. ಕಳೆದ ಮಂಗಳವಾರ ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗಲೂ ರಂಗಸ್ವಾಮಿ ರಸ್ತೆ ಮಧ್ಯೆ ಛೇಡಿಸಿದ್ದನು. ಆಗಲೂ ಪೂರ್ಣಿಮಾ ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದಳು. ಅಂದು ಊರಿನಿಂದ ಚಿಕ್ಕಮಗಳೂರಿಗೆ ಬಂದಿದ್ದರು. ಯಾಕಂದರೆ ಊರಲ್ಲಿ ಪೂರ್ಣಿಮ ಅಪ್ಪ ಲಕ್ಷ್ಮಣ ಶೆಟ್ಟಿ ಹಾಗೂ ಪೂರ್ಣಿಮಳಿಗೂ ರಸ್ತೆ ಮಧ್ಯೆ ರೇಗುವುದು, ಹಲ್ಲೆಗೆ ಮುಂದಾಗುವುದು ಮಾಡುತ್ತಿದ್ದನಂತೆ.
ಶಾಲೆಗೆ ಹೋಗಿ ಬರುತ್ತಿದ್ದ ಬಾಲಕಿಗೆ ನಿನ್ನ ಮುಖ ಚರ್ಯೆಯನ್ನೇ ಕತ್ತರಿಸುತ್ತೇನೆ ಎಂದು ಹೆದರಿಸುತ್ತಿದ್ದನಂತೆ. ಆಗಲೂ ಬಾಲಕಿ ಮನೆಯಲ್ಲಿ ಹೇಳಿದ್ದಳು. ಅಂದಿನಿಂದಲೂ ಮನೆಯಲ್ಲಿ ಮಂಕಾಗಿ ಇರುತ್ತಿದ್ದಳು. ರಂಗಸ್ವಾಮಿ ಲೀಲಾವತಿಗೆ ಏನೂ ಮಾಡುತ್ತಿರಲಿಲ್ಲ. ಆದರೆ ಪೂರ್ಣಿಮ ಹಾಗೂ ಆಕೆಯ ಅಪ್ಪ ಲಕ್ಷ್ಮಣ ಶೆಟ್ಟಿಗೆ ಹೆದರಿಸುತ್ತಿದ್ದನಂತೆ. ಕಳೆದೊಂದು ವಾರದಿಂದ ತೀರಾ ಮಂಕಾಗಿದ್ದ ಪೂರ್ಣಿಮ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.