– ಕೊರೊನಾಗೆ ಬಲಿಯಾದ ಮಹಿಳೆಯ ಮಗನ ಮನವಿ
– ನನ್ನ ಸ್ಥಿತಿ ಬೇರೆಯವರಿಗೆ ಬರೋದು ಬೇಡ
ಚಿಕ್ಕಮಗಳೂರು: ನನಗಂತೂ ಅಮ್ಮನ ಶವ ಸಂಸ್ಕಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾದಿಂದ ದೂರವಿರಿ, ನನ್ನ ಸ್ಥಿತಿ ಬೇರೆಯವರಿಗೆ ಬರೋದು ಬೇಡ ಎಂದು ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ನಾಗರಾಜ್ ಭಾವನಾತ್ಮಕ ವಿಡಿಯೋವನ್ನು ಹರಿ ಬಿಟ್ಟಿದ್ದಾರೆ.
ವಿಡಿಯೋದಲ್ಲಿ ಮಾಡಿರುವ ಅವರು, ನಾನು ಜಿಲ್ಲೆಯ ಅಜ್ಜಂಪುರ ತಾಲೂಕಿನ ಡಣಾಯಕನಪುರ ಗ್ರಾಮದವ, ಇತ್ತೀಚೆಗೆ ನನ್ನ ತಾಯಿಗೆ ಅನಾರೋಗ್ಯ ಕಾರಣ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಆಗ ವೈದ್ಯರು ನಿಮ್ಮ ತಾಯಿಗೆ ಕೊರೊನಾ ಪರೀಕ್ಷೆ ಮಾಡಿಸಿ, ಅವರಿಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿದರು. ಅಮ್ಮ 6 ತಿಂಗಳಿಂದ ಅಕ್ಕನ ಮನೆಯಲ್ಲಿದ್ದರು. ಅಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ವೈದ್ಯರಿಗೆ ತಿಳಿಸಿದೆ. ಆದರೂ ಅವರು ಟೆಸ್ಟ್ ಮಾಡಿಸಿ ಎಂದರು. ನಂತರ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿಗೆ ಕೊರೊನಾ ಪರೀಕ್ಷೆ ಮಾಡಿಸಿದೆ. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಯಿತು. ಈ ವೇಳೆ ತುಂಬಾ ಆಘಾತವಾಯಿತು. ಅಜ್ಜಂಪುರದ ಆಸ್ಪತ್ರೆಯಲ್ಲಿ ಮೂರು ದಿನ ಸೇವೆ ಮಾಡಿದ್ದೆ. ಆದರೆ ಕೊರೊನಾ ಸೋಂಕಿನ ಕಾರಣ ಚಿಕ್ಕಮಗಳೂರು ಆಸ್ಪತ್ರೆಯ ಒಳಗೆ ನನ್ನನ್ನು ಬಿಡಲಿಲ್ಲ. ಆಗ ಅಮ್ಮನಿಂದ ದೂರವಾದೆ ಎಂದು ವಿವರಿಸಿದ್ದಾರೆ.
Advertisement
Advertisement
ಅಮ್ಮ ನನ್ನನ್ನು ಬಿಟ್ಟು ಅರೆ ಕ್ಷಣವೂ ಇರುತ್ತಿರಲಿಲ್ಲ. ಆಸ್ಪತ್ರೆಯಲ್ಲಿಯೂ ರಾಜ, ರಾಜ ಎಂದು ಕನವರಿಸಿದ್ದಾರೆ. ಅಲ್ಲಿನ ನರ್ಸ್‍ಗಳಿಗೆ ಮಗ, ಮಗಳು ಬೇಕು ಎಂದು ಕೇಳಿದ್ದಾರೆ. ಆದರೆ ನಾವು ಅಲ್ಲಿಗೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. 72 ವರ್ಷದ ನಮ್ಮಮ್ಮನಿಗೆ ಯೂರಿನ್ ಇನ್ಫೆಕ್ಷನ್, ಹೊಟ್ಟೆ ನೋವು, ಕಫದ ಸಮಸ್ಯೆ ಇತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಅಮ್ಮನ ಜೊತೆ ನಾನು ಇದ್ದಿದ್ದಕ್ಕೆ ಹೋಮ್ ಕ್ವಾರಂಟೈನ್‍ನಲ್ಲಿದ್ದೆ. ನಂತರ ಅಮ್ಮನನ್ನು ನೋಡಲು ಆಸ್ಪತ್ರೆಗೆ ಹೋದೆ, ಅಮ್ಮನನ್ನು ನೋಡಿದೆ. ಆದರೆ ಶವಸಂಸ್ಕಾರಕ್ಕೆ ಹೋಗಲು ಬಿಡಲಿಲ್ಲ. ಈಗ ನನ್ನನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ದಯವಿಟ್ಟು ಯಾರೂ ಕೊರೊನಾ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಎಲ್ಲರೂ ಮಾಸ್ಕ್ ಧರಿಸಿ, ಅಪರಿಚಿತರನ್ನು ದೂರ ನಿಂತು ಮಾತನಾಡಿಸಿ. ಅಮ್ಮನಿಗೆ ಯಾವ ರೀತಿ ಕೊರೊನಾ ಬಂದಿತು ಗೊತ್ತಿಲ್ಲ. ಆದರೆ ಈಗ ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇನೆ. ಶವ ಸಂಸ್ಕಾರಕ್ಕೂ ಹೋಗಲು ಆಗಿಲ್ಲ, ದಯಮಾಡಿ ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನ ಶವ ಸಂಸ್ಕಾರಕ್ಕೆ ಹೋಗುವ ಯೋಗ ನನಗೆ ಸಿಗಲಿಲ್ಲ. ನೀವೆಲ್ಲರೂ ಕೊರೊನಾದಿಂದ ದೂರ ಇರಬೇಕೆಂದು ಮನವಿ ಮಾಡಿದ್ದಾರೆ.
Advertisement
ಗುರುವಾರ ವೃದ್ಧೆ ಸಾವು
ಗುರುವಾರ ನಗರದ ಕೋವಿಡ್ ಆಸ್ವತ್ರೆಯಲ್ಲಿ 72 ವರ್ಷದ ವೃದ್ಧೆ ಸಾವನ್ನಪ್ಪಿದ ಪ್ರಕರಣ ಸಂಬಂಧ ವೃದ್ಧೆಯ 52 ವರ್ಷದ ಮಗನಿಗೂ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಈಗ ವೃದ್ಧೆಯ ಟ್ರಾವೆಲ್ ಹಿಸ್ಟರಿ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುತ್ತಿದ್ದು, ಬೀರೂರು, ಅಜ್ಜಂಪುರ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಮೃತರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.
ಚನ್ನಗಿರಿಯ ಕುಂಬಾರ ಬೀದಿಯಲ್ಲಿ ಮೃತ ವೃದ್ಧೆಯ ಮಗಳ ಮನೆಯಿದ್ದು, ವೃದ್ಧೆ ಮಗಳ ಮನೆಗೆ ತೆರಳಿದ್ದರು. ಅವರ ಎದುರು ಮನೆಯ 52 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿ ಶಿವಮೊಗ್ಗದಲ್ಲಿ ಮೃತರಾಗಿದ್ದರು. ವೃದ್ಧೆಯಿಂದ ಕುಂಬಾರು ಬೀದಿಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಚನ್ನಗಿರಿಯಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಡಿದ್ದು ಚನ್ನಗಿರಿಯ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಹುಷಾರಾಗದ ಕಾರಣ ಬೀರೂರಿಗೆ ಬಂದು ಸೋಮವಾರ ಪರಿಚಯವಿದ್ದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಂತರದಲ್ಲಿ ಮಂಗಳವಾರ ಅಜ್ಜಂಪುರದ ಖಾಸಗಿ ಹಾಗೂ ಸರ್ಕಾರಿ ಆಸ್ವತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಂಗಳವಾರ ಶಿವಮೊಗ್ಗದಲ್ಲಿ ಮಗಳ ಮನೆಯ ಎದುರಿನ ಮಹಿಳೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವೃದ್ಧೆಯನ್ನು ತರೀಕೆರೆಗೆ ಕಳುಹಿಸಿ ಗಂಟಲು ದ್ರವವನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಬುಧವಾರ ಸಂಜೆ ಸುಮಾರಿಗೆ ಚಿಕ್ಕಮಗಳೂರು ಕೊವೀಡ್ ಆಸ್ವತ್ರೆಗೆ ವೃದ್ಧೆಯನ್ನು ದಾಖಲು ಮಾಡಲಾಯಿತು. ಗುರುವಾರ ಸಂಜೆ ವೇಳೆಗೆ ಮೃತ ವೃದ್ಧೆಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಮೃತರಾಗಿದ್ದಾರೆ. ಅಜ್ಜಂಪುರ, ಬೀರೂರಿನ ಖಾಸಗಿ ಆಸ್ವತ್ರೆ ಮಾತ್ರವಲ್ಲದೇ ಸರ್ಕಾರಿ ಆಸ್ವತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮೃತ ವೃದ್ಧೆಗೆ ಒಟ್ಟು ಆರು ವೈದ್ಯರು ಹಾಗೂ ದಾದಿಯರು ಚಿಕಿತ್ಸೆ ನೀಡಿದ್ದರು. ಇವರಿಗೆ ಕೊರೊನಾ ಕಂಟಕ ಎದುರಾಗುವ ಸಾಧ್ಯತೆಯೂ ಇದೆ. ವೃದ್ಧೆಯ ಸಂಪರ್ಕದಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ ಕೋವಿಡ್ ಪರೀಕ್ಷೆ ಮಾಡಿದ್ದು, ಕ್ವಾರಂಟೈನ್‍ಗೆ ಸೂಚಿಸಿದೆ.
ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ದಾದಿಯರು ಹಾಗೂ ವೈದ್ಯರಿಂದ ಹೊರ ರೋಗಿಗಳಿಗೂ ಸೋಂಕು ಹರಡು ಸಾಧ್ಯತೆ ಇದೆ ಎಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ವೃದ್ಧೆಯ ಸಾವಿನ ವಿಷಯ ತಿಳಿಯುತ್ತಿದ್ದಂತೆ, ಡಣಯಕಾಪುರ ಗ್ರಾಮದಲ್ಲೂ ಹಲವರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಮನೆಯಿಂದ ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಗುರುವಾರ ತಡರಾತ್ರಿ ವೃದ್ಧೆಯ ಜಮೀನಿನಲ್ಲಿ ಜಿಲ್ಲಾಡಳಿತ ಸೀಮಿತ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದೆ.