ಅಮ್ಮನನ್ನು ಕಳೆದುಕೊಂಡ ಮಗುವಿನ ನೆರವಿಗೆ ಬಂದ ಕಿಂಗ್ ಖಾನ್

Public TV
2 Min Read
sharaukh

– ತಾಯಿಯನ್ನು ಕಳೆದುಕೊಂಡ ನೋವು ನನಗೂ ಗೊತ್ತಿದೆ

ಮುಂಬೈ: ರೈಲ್ವೇ ನಿಲ್ದಾಣದಲ್ಲಿ ತಾಯಿ ಕಳೆದುಕೊಂಡ ಮಗುವಿನ ನೆರವಿಗೆ ಬಾಲಿವುಡ್‍ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಂದಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರಿಗೆ ಭಾರೀ ಸಮಸ್ಯೆಯಾಗಿದ್ದು, ಅದರಲ್ಲೂ ಪುಟ್ಟ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಬೇರೆ ಬೇರೆ ಕಡೆ ಕೂಲಿ ಕೆಲಸಕ್ಕೆ ಹೋಗಿದ್ದ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ತಮ್ಮ ಗ್ರಾಮಗಳನ್ನು ಸೇರುವ ತವಕದಲ್ಲಿ ಊಟ ಬಿಟ್ಟು ಸಾವನ್ನಪ್ಪುತ್ತಿದ್ದಾರೆ. ಹಾಗೆಯೇ ಸಾವನ್ನಪ್ಪಿದ ಕೂಲಿಕಾರ್ಮಿಕ ಮಹಿಳೆಯ ಮಗುವಿನ ನೆರವಿಗೆ ಶಾರುಖ್ ಖಾನ್ ಅವರು ಬಂದಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾವನ್ನಪ್ಪಿದ ತಾಯಿಯ ಬಟ್ಟೆಯ ಜೊತೆ ಪುಟ್ಟಮಗುವೊಂದು ಆಟವಾಡುತ್ತಿರುವ, ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಬಿಹಾರದ ಮುಜಾಫರ್ ನಗರದ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆ ಕಂಡು ಮರುಗಿರುವ ಶಾರುಖ್ ಖಾನ್, ಅವರ ಮೀರ್ ಫೌಂಡೇಶನ್ ಕಡೆಯಿಂದ ಆ ಮಗುವಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಾರುಖ್ ಖಾನ್ ಅವರು, ಪುಟ್ಟ ಮಗುವನ್ನು ಹುಡುಕಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಧಿಯಾಟದಿಂದ ತನ್ನ ಪೋಷಕರನ್ನು ಕಳೆದುಕೊಂಡ ಆ ಮಗುವಿಗಾಗಿ ನಾವು ಪ್ರಾರ್ಥಿಸೋಣ. ನನಗೂ ತಾಯಿಯನ್ನು ಕಳೆದುಕೊಂಡ ನೋವು ಏನು ಎಂಬುದು ಗೊತ್ತು. ನಿಮ್ಮ ಪ್ರೀತಿ ಮತ್ತು ಬೆಂಬಲ ಆ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.

shahrukh khan 1

ಈ ವಿಚಾರವಾಗಿ ಮೀರ್ ಫೌಂಡನೇಶನ್ ಕೂಡ ಟ್ವೀಟ್ ಮಾಡಿದ್ದು, ಈ ಮಗುವನ್ನು ಸೇರಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಸಾವನ್ನಪ್ಪಿದ ತಾಯಿಯನ್ನು ಪುಟ್ಟಕಂದ ಬಟ್ಟೆ ಎಳೆದು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಮನಕಲಕುವ ವಿಡಿಯೋವನ್ನು ನೀವು ನೋಡಿದ್ದೀರಾ. ನಾವು ಈಗ ಆ ಮಗುವಿನ ನೆರವಿಗೆ ಬಂದಿದ್ದೇನೆ. ಜೊತೆಗೆ ಆ ಮಗು ಈಗ ಅವರ ತಾತ-ಅಜ್ಜಿಯ ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

Lockdown Baby

23 ವರ್ಷದ ಬಿಹಾರ ಮೂಲದ ಕಾರ್ಮಿಕರ ಮಹಿಳೆ ಗುಜರಾತ್‍ನ ಅಲಹಾಬಾದ್‍ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಳು. ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಿಸಿದ್ದ ಮಹಿಳೆ ಅನಾರೋಗ್ಯದ ಸಮಸ್ಯೆಗೆ ಗುರಿಯಾಗಿದ್ದಳು. ಇದೇ ಸಂದರ್ಭದಲ್ಲಿ ಸರ್ಕಾರ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಆರಂಭಿಸಿದ್ದ ಕಾರಣ ತನ್ನ ಸ್ವ-ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದ ಮಹಿಳೆ ಮೇ 24 ರಂದು ರೈಲಿನಲ್ಲಿ ಸಹೋದರಿ ಹಾಗೂ ಇತರರೊಂದಿಗೆ ಮುಜಾಫರ್ ನಗರಕ್ಕೆ ಹೊರಟ್ಟಿದ್ದಳು. ಆದರೆ ರೈಲಿನ ಪ್ರಯಾಣದ ಸಂದರ್ಭದಲ್ಲೂ ಆಹಾರ ಸಿಗದೆ ಮತ್ತಷ್ಟು ಬಳಲಿದ್ದ ಮಹಿಳೆ ಮುಜಾಫರ್ ನಗರಕ್ಕೆ ಆಗಮಿಸುವ ಮುನ್ನವೇ ರೈಲಿನಲ್ಲೇ ಕುಸಿದು ಸಾವನ್ನಪ್ಪಿದ್ದಳು.

Share This Article
Leave a Comment

Leave a Reply

Your email address will not be published. Required fields are marked *