ವರ್ಷದ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರ ಕಡೆಯಿಂದ ಅಪಾರ ಪ್ರೀತಿ, ಮೆಚ್ಚುಗೆ ಗಳಿಸಿಕೊಂಡಿದ್ದ ಚಿತ್ರ ಫೇಸ್ ಟು ಫೇಸ್. ಸಂದೀಪ್ ಜನಾರ್ಧನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಹೊಸತನದ ಸುಳಿವು ಕೊಡುತ್ತಲೇ ಸೃಷ್ಟಿಸಿದ್ದ ಸಂಚಲನವನ್ನು ಪ್ರೇಕ್ಷಕರ್ಯಾರೂ ಮರೆತಿರಲಿಕ್ಕಿಲ್ಲ. ಹೊಸಬರ ತಂಡ, ಅದರ ಫಲವಾಗಿ ಪಡಿಮೂಡಿಕೊಂಡಿದ್ದ ಹೊಸ ಆವೇಗ… ಇಂಥಾ ಒಡ್ಡೋಲಗದಲ್ಲಿಯೇ ತೆರೆ ಕಂಡಿದ್ದ ಫೇಸ್ ಟು ಫೇಸ್ ಗೆದ್ದಿತ್ತು. ಇದೀಗ ಮತ್ತೆ ಅದರ ಹಂಗಾಮ ಅಮೇಜಾನ್ ಪ್ರೈಮ್‍ನಲ್ಲಿ ಶುರುವಾಗಿದೆ.
ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ದಿವ್ಯಾ ಉರುಡಗ ಮತ್ತು ಪೂರ್ವಿ ಜೋಶಿ ನಾಯಕಿಯರಾಗಿ ನಟಿಸಿದ್ದಾರೆ. ಈ ಎಲ್ಲರೂ ಕೂಡಾ ತಂತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸೋ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅಮೇಜಾನ್ ಪ್ರೈಮ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳೋ ಖುಷಿ ಅವರೆಲ್ಲರಲ್ಲಿದೆ. ಮೇಲು ನೋಟಕ್ಕೆ ಸರಳವಾಗಿ ಕಾಣುವ, ಪ್ರೇಮದ ಸುತ್ತ ಗಿರಕಿ ಹೊಡೆಯುವಂತೆ ಕಾಣುವ ಕಥಾ ಎಳೆ ಅಷ್ಟು ಸಲೀಸಾಗಿ ಬಿಚ್ಚಿಕೊಳ್ಳುವಂಥಾದ್ದಲ್ಲ. ನಿರ್ದೇಶಕ ಸಂದೀಪ್ ಜನಾರ್ಧನ್ ಸ್ಕ್ರೀನ್ ಪ್ಲೇ ಮೂಲಕವೇ ಅದನ್ನು ಪರಿಣಾಮಕಾರಿಯಾಗಿಸಿದ್ದಾರೆ.
ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆಯ ಗಾಲಿಗಳು ಅಡ್ಡಾಡುತ್ತವೆ. ಆದರೆÉ ಕಥೆಯೆಂಬುದು ಹಠಾತ್ತನೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಒಂದು ಸಿನಿಮಾವನ್ನು ನೋಡುಗರ ಪಾಲಿಗೆ ಯಾವ್ಯಾವ ಅಂಶಗಳು ವಿಶೇಷವಾಗಿಸಬಹುದೋ ಅದೆಲ್ಲವನ್ನೂ ಒಳಗೊಂಡಿರೋ ಚಿತ್ರ ಫೇಸ್ ಟು ಫೇಸ್. ಕಥೆ ಸೇರಿದಂತೆ ಎಲ್ಲದರಲ್ಲಿಯೂ ಇಲ್ಲಿ ಹೊಸತನಗಳು ಕಾಣಿಸುತ್ತವೆ.
ಅದರಲ್ಲಿಯೂ ವಿಶೇಷವಾಗಿ ಸ್ಕ್ರೀನ್ ಪ್ಲೇನಲ್ಲಿ ಹೊಸತನವಿದೆ. ಅದರ ಬಲದಿಂದಲೇ ಇಡೀ ಸಿನಿಮಾ ಹೆಜ್ಜೆಹೆಜ್ಜೆಗೂ ನೋಡುಗರನ್ನು ಸರ್‍ಪ್ರೈಸ್‍ಗಳೊಂದಿಗೆ ಮುಖಾಮುಖಿಯಾಗಿಸುತ್ತೆ. ಈ ಕೊರೋನಾ ಕಾಲದಲ್ಲಿ ಸದರಿ ಚಿತ್ರ ಅಮೇಜಾನ್ ಪ್ರೈಮ್‍ಗೆ ಆಗಮಿಸಿದೆ. ಹಾಗೆ ಅಮೇಜಾನ್ ಪ್ರೈಮ್‍ಗೆ ಬರುತ್ತಲೇ ಬಹು ಬೇಡಿಕೆಯೊಂದಿಗೆ ಮುಂದುವರೆಯುತ್ತಿದೆ. ಇದು ನಿಜಕ್ಕೂ ಹೊಸ ಬಗೆಯ ಚಿತ್ರ. ಇದನ್ನು ವೀಕ್ಷಿಸೋದರೊಂದಿಗೆ ನಿಮ್ಮ ಲಾಕ್‍ಡೌನ್ ಕಾಲಾವಧಿ ಸಹನೀಯವಾಗಲಿ!