– ಪೊಲೀಸರಿಗೆ ಮಾಹಿತಿ ನೀಡಿ ಭಾರತಕ್ಕೆ ಹಾರಿದ ಮಾಜಿ ಗೆಳೆಯ
ನ್ಯೂಯಾರ್ಕ್: ಅಮೆರಿಕದ (America) ಮೇರಿಲ್ಯಾಂಡ್ ನಗರದಲ್ಲಿ ಮಾಜಿ ಬಾಯ್‌ಫ್ರೆಂಡ್‌ನ ಅಪಾರ್ಟ್ಮೆಂಟ್‌ನಲ್ಲಿ ಭಾರತ (India) ಮೂಲದ ಯುವತಿಯ ಶವ ಪತ್ತೆಯಾಗಿದೆ.
ಕೊಲೆಯಾದ ಯುವತಿಯನ್ನು ಎಲ್ಲಿಕಾಟ್ ನಗರದ ಡೇಟಾ ವಿಶ್ಲೇಷಕಿ ನಿಕಿತಾ ಗೋಡಿಶಾಲ (27) (Nikitha Godishala) ಎಂದು ಗುರುತಿಸಲಾಗಿದೆ ಎಂದು ಹೊವಾರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ಆಕೆಯ ಶವ ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ (26) ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಆತನ ವಿರುದ್ಧ ಪೊಲೀಸರು ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಪಡೆದಿದ್ದಾರೆ. ಇದನ್ನೂ ಓದಿ: ಜರ್ಮನಿಯ ಮನೆಯಲ್ಲಿ ಬೆಂಕಿ ಅವಘಡ; ಹೊಸ ವರ್ಷದಂದೇ ಭಾರತೀಯ ವಿದ್ಯಾರ್ಥಿ ಸಾವು
ಅರ್ಜುನ್ ಶರ್ಮಾ ಜನವರಿ 2 ರಂದು ನಿಕಿತಾ ಗೋಡಿಶಾಲ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಡಿಸೆಂಬರ್ 31 ರಂದು ಮೇರಿಲ್ಯಾಂಡ್ ನಗರದ ತನ್ನ ಅಪಾರ್ಟ್‌ಮೆಂಟ್‌ಲ್ಲಿ ತಾನು ಕೊನೆಯದಾಗಿ ಅವಳನ್ನು ನೋಡಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದ. ಪೊಲೀಸರು ಮಾಹಿತಿ ಆಧರಿಸಿ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಗಿದೆ. ಶವದ ಮೇಲೆ ಗಾಯಗಳಾಗಿರುವುದು ಕಂಡುಬಂದಿದೆ.
ಗೋಡಿಶಾಲ ನಾಪತ್ತೆಯಾಗಿದ್ದಾಳೆ ಎಂದು ಶರ್ಮಾ ಪೊಲೀಸರಿಗೆ ಮಾಹಿತಿ ನೀಡಿದ ದಿನವೇ ಭಾರತಕ್ಕೆ ವಿಮಾನದ ಮೂಲಕ ತೆರಳಿದ್ದಾನೆ. ಡಿ.31 ರಂದು ಸಂಜೆ 7 ಗಂಟೆಯ ನಂತರ ಶರ್ಮಾ, ಗೋಡಿಶಾಲನನ್ನು ಕೊಂದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆತನನ್ನು ಬಂಧಿಸಲು ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಮೊರೆಹೋಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಿಕಿತಾ ಗೋಡಿಶಾಲ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಹಿಂದೂ ವ್ಯಕ್ತಿಯ ಹತ್ಯೆ ಕೇಸ್ – ಬಾಂಗ್ಲಾ ಪೊಲೀಸರಿಂದ ಮೂವರು ಆರೋಪಿಗಳ ಬಂಧನ


