ಕಾರವಾರ: ವಿದೇಶದಲ್ಲಿ ಉದ್ಯೋಗ ಮಾಡುವ ಕನಸು ಕಂಡಿದ್ದ ಯುವತಿಯೊಬ್ಬಳು ವಂಚಕರ ಬಲೆಗೆ ಬಿದ್ದು ತನ್ನಲ್ಲಿದ್ದ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿರುವ ಘಟನೆ ಹೊನ್ನಾವರದಲ್ಲಿ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನೇತ್ರಾವತಿ (25) ಹಣ ಕಳೆದುಕೊಂಡವರು. ನರ್ಸಿಂಗ್ ಕೋರ್ಸ್ ಮಾಡಿದ್ದ ನೇತ್ರಾವತಿ ಕೆಲವು ವರ್ಷ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ತಮ್ಮೂರಿಗೆ ವಾಪಸ್ ಬಂದು, ಬೇರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತಿದ್ದರು. ಮತ್ತೆ ವಿದೇಶದಲ್ಲೇ ಉದ್ಯೋಗ ಮಾಡುವ ಆಕಾಂಕ್ಷೆ ಹೊಂದಿದ್ದರು. ನೇತ್ರಾವತಿ ಇ-ಮೇಲ್ ಗೆ ಖಾತೆಗೆ ಅಪರಿಚಿತ ಮೇಲ್ ಸಂದೇಶ ಒಂದು ಬಂದಿದ್ದನ್ನು ಗಮನಿಸಿ ನಿಜ ಎಂದು ನಂಬಿ ಬರೋಬ್ಬರಿ 57.14 ಲಕ್ಷ ಕಳೆದುಕೊಂಡಿದ್ದಾರೆ.
ವಂಚನೆ ಆಗಿದ್ದು ಹೇಗೆ?
ನೇತ್ರಾವತಿಯವರ ಇ-ಮೇಲ್ ಖಾತೆಗೆ ಅಪರಿಚಿತರು ಕಳುಹಿಸಿದ್ದ ಸಂದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯ ಉಲ್ಲೇಖವಿತ್ತು. ಅದಕ್ಕೆ ಕರೆ ಮಾಡಿ ಪರಿಚಯ ಹೇಳಿಕೊಂಡಿದ್ದರು. ಕರೆ ಸ್ವೀಕರಿಸಿದ್ದ ವಂಚಕರು, ಯುವತಿಯ ಸಾಮಾಜಿಕ ಜಾಲತಾಣ ಒಂದಕ್ಕೆ ಪ್ರಶ್ನೆ ಪತ್ರಿಕೆಯೊಂದನ್ನು ಕಳುಹಿಸಿಕೊಟ್ಟು ಉತ್ತರಿಸುವಂತೆ ತಿಳಿಸಿದ್ದರು. ಉತ್ತರ ಪತ್ರಿಕೆ ತಲುಪಿದ ಬಳಿಕ ಆರೋಪಿಗಳು ಪಾಸ್‍ಪೋರ್ಟ್, ವೀಸಾ, ವೈದ್ಯಕೀಯ ಪ್ರಮಾಣಪತ್ರ, ನಿರಾಕ್ಷೇಪಣಾ ಪತ್ರ, ಆರೋಗ್ಯ ವಿಮೆ ಮುಂತಾದವುಗಳಿಗೆ ಶುಲ್ಕ, ತೆರಿಗೆ ಪಾವತಿಸಲು ಹೇಳಿದ್ದರು. ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ 57.14 ರೂ. ಲಕ್ಷ ಹಣ ಜಮೆ ಮಾಡಿದ್ದಾರೆ.
ವಿದೇಶದಲ್ಲಿ ಉದ್ಯೋಗವನ್ನು ನಂಬಿ ತಮ್ಮ ಸಂಪಾದನೆ, ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ, ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಹಣ ಹೊಂದಿಸಿದ್ದ ನೇತ್ರಾವತಿಯವರು ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಹಣ ಪಾವತಿಸಿದ್ದರೂ ನೇಮಕಾತಿ ಆದೇಶ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಹಿಂದೆ ಸಂಪರ್ಕಿಸಿದ ದೂರವಾಣಿಗೆ ಕರೆ ಮಾಡಿ ಕೇಳಿದರೆ ಅವರಿಂದ ಯಾವುದೇ ರೀತಿಯ ಸ್ಪಷ್ಟನೆಯಾಗಲೀ ಹಣ ಮರಳಿಸುವ ಬಗ್ಗೆ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ನೇತ್ರಾವತಿಯವರು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು, ಕಾರವಾರದ ಸಿಇಎನ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.