ಅಮೆರಿಕದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ: ಬೈಡೆನ್

Public TV
2 Min Read
america vaccine mask

ವಾಷಿಂಗ್ಟನ್: ಅಮೆರಿಕ ಅತೀ ಬೇಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಲ್ಲಿನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್(ಸಿಡಿಸಿ) ಸ್ಪಷ್ಟಪಡಿಸಿದೆ.

vaccine image

ಗುರುವಾರ ಈ ಕುರಿತು ಘೋಷಣೆ ಮಾಡುತ್ತಿದ್ದಂತೆ ವೈಟ್ ಹೌಸ್‍ನ ರೋಸ್ ಗಾರ್ಡನ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾಸ್ಕ್ ಧರಿಸದೇ ಭಾಗವಹಿಸಿದ್ದಾರೆ. ಇದೊಂದು ಅದ್ಭುತ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ಅಸಮಾನ್ಯ ಸಾಧನೆಯಿಂದ ಇದು ಸಾಧ್ಯವಾಗಿದೆ, ಅತೀ ವೇಗವಾಗಿ ಅಮೆರಿಕನ್ನರಿಗೆ ನಾವು ಲಸಿಕೆ ನೀಡುತ್ತಿದ್ದೇವೆ ಎಂದು ಬೈಡೆನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿಡಿಸಿಯ ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿಸಿರುವ ಬೈಡೆನ್, ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲುವುದು ವಿರಳಾತಿವಿರಳ. ಹೀಗಾಗಿ ನೀವು ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ ಒಂದು ಡೋಸ್ ಪಡೆದು, ಮತ್ತೊಂದು ಡೋಸ್ ಪಡೆಯಲು ಕಾಯುತ್ತಿದ್ದರೆ ಎರಡನೇ ಡೋಸ್ ಲಸಿಕೆ ಪಡೆಯುವ ವರೆಗೆ ಕಾಯಬೇಕು, ಅಲ್ಲಿಯವರೆಗೆ ಮಾಸ್ಕ್ ಧರಿಸಬೇಕು ಎಂದು ಅವರು ವಿವರಿಸಿದ್ದಾರೆ.

ಕೇವಲ 114 ದಿನಗಳಲ್ಲಿ 250 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಇದರ ಪ್ರತಿಫಲವಾಗಿ 50 ರಾಜ್ಯಗಳ ಪೈಕಿ 49 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಏಪ್ರಿಲ್ 2020ರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಸಾವಿನ ಪ್ರಮಾಣ ಸಹ ಶೇ.80ರಷ್ಟು ತಗ್ಗಿದೆ. ಇತರೆ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

maskless outdoors custom 82bec4c4a52166e67be21d92a63aebc3825ad0ae s800 c85

ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಫೆಡರಲ್, ಸ್ಟೇಟ್, ಸ್ಥಳೀಯ ಅಥವಾ ಪ್ರಾದೇಶಿಕ ಕಾನೂನು, ನಿಯಮಗಳು, ಸ್ಥಳೀಯ ವ್ಯವಹಾರ ಹಾಗೂ ಕೆಲಸದ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಹೊರತುಪಡಿಸಿ ಉಳಿದೆಡೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ತಮ್ಮ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು ಎಂದು ಸಿಡಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *