ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟ ಸ್ಟ್ರೈಕರ್!

Public TV
1 Min Read
Striker

ಕೊರೊನಾ ಕಾಟದಿಂದ ಚಿತ್ರಮಂದಿರಗಳು ಮುಚ್ಚಿಕೊಂಡಿರೋದರ ಬಗ್ಗೆ ಚಿತ್ರ ಪ್ರೇಮಿಗಳಲ್ಲೊಂದು ಕೊರಗಿದೆ. ಅದನ್ನು ಕೊಂಚ ನೀಗಿಸಿ ಮನೆಯೊಳಗೆ ಬಣ್ಣದ ಜಗತ್ತು ಕಣ್ತೆಯುವಂತೆ ಮಾಡುವಲ್ಲಿ ಅಮೆಜಾನ್ ಪ್ರೈಮ್‍ನ ಪಾತ್ರ ದೊಡ್ಡದು. ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ. ಅದರಲ್ಲಿಯೇ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿವೆ. ಅಂಥಾದ್ದೇ ಆವೇಗದೊಂದಿಗೆ ಇದೀಗ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರೋ ‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟಿದೆ.

Striker 1

ಇದು ಗರುಡಾದ್ರಿ ಫಿಲಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು, ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದ ಚಿತ್ರ. ಪ್ರವೀಣ್ ತೇಜ್ ಮತ್ತು ಶಿಲ್ಪಾ ಮಂಜುನಾಥ್ ನಾಯಕ ನಾಯಕಿಯರಾಗಿ ನಟಿಸಿದ್ದ ಸ್ಟ್ರೈಕರ್ ಈ ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಆರಂಭದಲ್ಲಿಯೇ ವಿಭಿನ್ನ ಕಥಾ ಹಂದರದ ಸುಳಿವಿನೊಂದಿಗೆ ಮಿರುಗುತ್ತಾ ಅದೇ ಆವೇಗದಲ್ಲಿ ತೆರೆ ಕಂಡಿತ್ತು. ಆ ಬಳಿಕ ಪ್ರೇಕ್ಷಕರೆಲ್ಲ ಈ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಗೆ ಮಾರು ಹೋಗಿದ್ದರು.

Striker 2

ನಿರ್ದೇಶಕ ಪವನ್ ತ್ರಿವಿಕ್ರಮ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದ ರೀತಿಯೇ ಅಂಥಾದ್ದಿದೆ. ಕ್ರೈಂ ಥ್ರಿಲರ್ ಚಿತ್ರಗಳನ್ನು ಅನುಭವಿಸಿ ನೋಡೋ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಹಾಗಿದ್ದ ಮೇಲೆ ಹೊಸ ಪ್ರಯೋಗಗಳೊಂದಿಗೆ ರೂಪುಗೊಂಡಿದ್ದ ಸ್ಟ್ರೈಕರ್ ಅವರಿಗೆ ಇಷ್ಟವಾಗದಿರಲು ಸಾಧ್ಯವೇ? ಈ ಕಾರಣದಿಂದಲೇ ಸ್ಟ್ರೈಕರ್ ಗೆಲುವು ಕಂಡಿತ್ತು. ಇದೀಗ ಆ ಚಿತ್ರ ಕೊರೊನಾ ಕಾಲದಲ್ಲಿ ಮತ್ತಷ್ಟು ಜನರನ್ನು ತಲುಪಿಕೊಳ್ಳುವ ಇರಾದೆಯಿಂದ ಅಮೆಜಾನ್ ಪ್ರೈನಲ್ಲಿ ಕಾರುಬಾರು ಆರಂಭಿಸಿದೆ.

Striker 3

ಮೂವರು ಸ್ನೇಹಿತರು ಮತ್ತು ಅಲ್ಲಿ ನಡೆಯೋ ಒಂದು ಕೊಲೆಯ ಸುತ್ತಲಿನ ಕಥಾ ಹಂದರ ಈ ಸಿನಿಮಾದಲ್ಲಿದೆ. ಹಾಗಂತ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಕಥೆಯ ಕೇಂದ್ರಕ್ಕೆ ಹಲವಾರು ಕವಲುಗಳಿದ್ದಾವೆ. ಅವೆಲ್ಲವನ್ನೂ ಅಪರಿಮಿತವಾದ ರೋಮಾಂಚಕ ಶೈಲಿಯಲ್ಲಿ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಚೇತೋಹಾರಿ ಅನುಭವ ನೀಡುವ, ರೋಮಾಂಚಕ ಕ್ಷಣಗಳನ್ನ ಯಥೇಚ್ಛವಾಗಿ ಕೊಡಮಾಡುವ ಸ್ಟ್ರೈಕರ್ ನಿಮ್ಮೊಳಗಿನ ಏಕತಾನತೆಯನ್ನ ನೀಗಿಸುವಂತಾಗಲಿ.

Share This Article
Leave a Comment

Leave a Reply

Your email address will not be published. Required fields are marked *