ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್‍ಗೆ ಕೊರೊನಾ ಸೋಂಕು ತಗುಲಿದ್ದು, ಹೋಮ್ ಐಸೋಲೇಟ್ ಆಗಿದ್ದಾರೆ.
ಕೊರಾನಾ ಪಾಸಿಟಿವ್ ವರದಿ ಬರುತ್ತಿದ್ದಂತೆ ಅಮೀರ್ ಖಾನ್ ಹೋಮ್ ಐಸೋಲೇಟ್ ಆಗಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ. ಅಲ್ಲದೆ ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅಮೀರ್ ಖಾನ್ ವಕ್ತಾರರು ಈ ಬಗ್ಗೆ ಖಚಿತಪಡಿಸಿದ್ದು, ಅಮೀರ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೋಮ್ ಐಸೋಲೇಟ್ ಆಗಿದ್ದಾರೆ. ಕೊರೊನಾದ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದಾರೆ, ಆರಾಮಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರ ಸಂಪರ್ಕಕ್ಕೆ ಬಂದವರು ದಯವಿಟ್ಟು ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ. ನಿಮ್ಮೆಲ್ಲ ಹಾರೈಕೆ ಹಾಗೂ ಕಾಳಜಿಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಗುಲುವುದಕ್ಕೂ ಮುನ್ನ ನಟಿ ಕಿಯಾರಾ ಅಡ್ವಾಣಿಯವರು ಅಮೀರ್ ಖಾನ್ ಜೊತೆ ನಟಿಸುತ್ತಿದ್ದರು. ಕಿಯಾರಾ ಅಡ್ವಾಣಿ ಸಹ ಕೊರೊನಾ ಪರೀಕ್ಷೆ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಭೂಲ್ ಭುಲಿಯಾ-2 ಚಿತ್ರದಲ್ಲಿ ಅಮಿರ್ ಖಾನ್ ಜೊತೆ ನಟಿ ಕಿಯಾರಾ ನಟಿಸುತ್ತಿದ್ದರು. ಇದಕ್ಕೂ ಮುನ್ನ ಭೂಲ್ ಭುಲೆಯಾ-2 ಸಿನಿಮಾದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೆ ಸೋಂಕು ತಗುಲಿತ್ತು. ಬಳಿಕ ಅಮಿರ್ ಖಾನ್ ಹಾಗೂ ಕಿಯಾರಾ ಅಡ್ವಾಣಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.
ಇತ್ತೀಚೆಗೆ ನಟ ರಣಬಿರ್ ಕಪೂರ್, ಮನೋಜ್ ಬಾಜಪೇಯಿ, ಸಿದ್ಧಾಂತ್ ಚತುರ್ವೇದಿ, ತಾರಾ ಸುತಾರಿಯಾ ಹಾಗೂ ಸತೀಶ್ ಕೌಶಿಕ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಅಮಿರ್ ಖಾನ್ ಅವರು 56ನೇ ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ಕುರಿತು ಶಾಕಿಂಗ್ ನ್ಯೂಸ್ ನೀಡಿದ್ದರು. ಅಮಿರ್ ಖಾನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದ ಖಾತೆ ಮೂಲಕ ತಮ್ಮ ಜೀವನ, ಸಿನಿಮಾ ಕುರಿತು ಅಪ್‍ಡೇಟ್ಸ್‍ಗಳನ್ನು ನೀಡುವುದಾಗಿ ತಿಳಿಸಿದ್ದರು. ಅಲ್ಲದೆ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತಿರುವುದಾಗಿ ತಿಳಿಸಿದ್ದರು.