ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅನಾರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಶನಿವಾರ ಬಹಿರಂಗ ಪಡೆಸಿದ್ದರು. ಇದೀಗ ಅಮಿತಾಬ್ ಬಚ್ಚನ್ ಶಸ್ತ್ರ ಚಿಕಿತ್ಸೆ ಪೂರ್ಣಗೊಂಡಿದ್ದು, ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
78 ವರ್ಷದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ನನ್ನ ಮೇಲೆ ನೀವು ತೋರಿಸಿದ ಪ್ರೀತಿ, ಕಾಳಜಿ ಮತ್ತು ಹಾರೈಕೆಗಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಆರೋಗ್ಯದ ಸ್ಥಿತಿ ಮತ್ತು ಯಾವ ಶಸ್ತ್ರಚಿಕಿತ್ಸೆ ಎಂಬುದರ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದರು.
ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್, ನಟ ಅಜಯ್ ದೇವ್‍ಗನ್ ನಿರ್ದೇಶಿಸಿ ಅಭಿನಯಿಸುತ್ತಿರುವ ಮೇ ಡೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ. ಅಲ್ಲದೆ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣರ ಜೊತೆ ಇನ್ನೂ ಹೆಸರಿಡದ ಬಾಲಿವುಡ್ ಸಿನಿಮಾದಲ್ಲಿ ಕೂಡ ಅಭಿನಯಿಸಲಿದ್ದಾರೆ.