ಬೆಂಗಳೂರು: ದೀಪಾವಳಿ ಹಬ್ಬ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿರುವ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಾ ಇದೆ.
ಬೆಳ್ಳಂಬೆಳ್ಳಗ್ಗೆ ಪೂಜೆ ಸಲ್ಲಿಸಲು ಪುಟ್ಟ ಪುಟ್ಟ ಕಂದಮ್ಮಗಳನ್ನ ಜೊತೆ ಕುಟುಂಬ ಸಮೇತರಾಗಿ ಜನ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಆದರೆ ಜನ ದೇವಸ್ಥಾನದ ಒಳಗೆ ಕೊರೊನಾ ನಿಯಮವನ್ನ ಪಾಲನೆ ಮಾಡುತ್ತಿಲ್ಲ. ಭಕ್ತರು ಸಾಮಾಜಿಕ ಅಂತರ ಮರೆತು ಗುಂಪು ಗೂಡಿದ್ದಾರೆ.
ಮಾಸ್ಕ್ ಕೂಡ ಹಾಕದೇ ಪೂಜೆಯಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಮಾಸ್ಕ್ ಹಾಕಿದರೂ ಸರಿಯಾಗಿ ಹಾಕಿಲ್ಲ, ಕಾಟಾಚಾರಕ್ಕೆ ಮಾಸ್ಕ್ ಧರಿಸಿದಂತೆ ಭಾಸವಾಗುತ್ತಿದೆ. ಇನ್ನೂ ಕೆಲವರು ಪುಟ್ಟ ಕಂದಮ್ಮನನ್ನ ದೇವಸ್ಥಾನಕ್ಕೆ ಕರೆತಂದಿದ್ದಾರೆ. ಆದರೆ ಮನೆಯವರು ಮಾಸ್ಕ್ ಹಾಕಿದ್ದರೆ ಕಂದಮ್ಮನಿಗೆ ಮಾಸ್ಕ್ ಹಾಕಿಲ್ಲ. ಈ ರೀತಿ ಅಣ್ಣಮ್ಮ ದೇವಸ್ಥಾನದ ಬಳಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಇತ್ತ ಮಲ್ಲೇಶ್ವರಂ ದೇವಾಲಯಗಳು ಖಾಲಿ ಖಾಲಿಯಾಗಿವೆ. ಕೊರೊನಾ ಭಯದಿಂದ ದೇವಾಲಯದ ಕಡೆ ಜನರೇ ಬಂದಿಲ್ಲ. ಸರ್ಕಲ್ ಮಾರಮ್ಮ, ಗಂಗಮ್ಮ ದೇವಾಲಯ ಲಕ್ಷ್ಮೀ ನರಸಿಂಹ ದಕ್ಷಿಣ ಮುಖ ನಂದಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಕಾಣಿಸುತ್ತಿದ್ದಾರೆ. ಇನ್ನು ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಜನ ಜಾತ್ರೆ ತುಂಬಿ ತುಳುಕುತ್ತಿದ್ದು, ಜನ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ನೂರಾರು ಜನ ಕ್ಯೂ ನಿಂತಿದ್ದು, ಸಾಮಾಜಿಕ ಅಂತರವನ್ನೇ ಮರೆತು ದೇವರ ದರ್ಶನದಲ್ಲಿ ಮುಳುಗಿದ್ದಾರೆ.