ರಾಯಚೂರು: ಮಸ್ಕಿ ಉಪಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ತುಂಬು ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು ಜೆಡಿಎಸ್ ಸದ್ಯಕ್ಕೆ ತಟಸ್ಥವಾಗಿದೆ. ಸಮಾವೇಶಗಳ ಮೂಲಕ ಕಾರ್ಯಕರ್ತರ ಸಂಘಟನೆಯ ಜೊತೆ ತಳಮಟ್ಟದಿಂದಲೂ ಪಕ್ಷ ಬಲಪಡಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮುಂದಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಪ್ರಬಲ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಪಕ್ಷಗಳು ಮಾತ್ರ ಅದಲು ಬದಲು ಆಗಿರುವುದರಿಂದ ಕಾರ್ಯಕರ್ತರು ಸಹ ಪಕ್ಷಗಳನ್ನು ಬದಲಿಸಿದ್ದಾರೆ.
ನವೆಂಬರ್ 7ರಂದು ಬೆಂಗಳೂರಲ್ಲಿ ಅನೌಪಚಾರಿಕವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಆರ್.ಬಸನಗೌಡ ತುರುವಿಹಾಳ ನವೆಂಬರ್ 23ರಂದು ಸುಮಾರು ಐದು ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಪ್ರತಾಪ್ ಗೌಡರನ್ನು ಸೋಲಿಸಲು ಕಾಂಗ್ರೆಸ್‍ಗೆ ಬಂದಿರುವುದಾಗಿ ಹೇಳಿರುವ ಬಸನಗೌಡ ಬಿಜೆಪಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಬೆಲೆಯಿಲ್ಲದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಅಂತ ತಿಳಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಲಿಗೆ ನಮಸ್ಕರಿಸಿ, ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
Advertisement
Advertisement
ಸಮಾವೇಶದಲ್ಲಿ ಸುಮಾರು 20 ಸಾವಿರ ಜನರನ್ನು ಸೇರಿಸುವ ಮೂಲಕ ಬಲಪ್ರದರ್ಶನವನ್ನೂ ಕಾಂಗ್ರೆಸ್ ಮಾಡಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಪಕ್ಷ ಹಾಗೂ ಮತದಾರರಿಗೆ ಮೋಸ ಮಾಡಿದ್ದಾರೆ. ಪ್ರತಾಪ್ ಗೌಡರನ್ನು ಗೆಲ್ಲುವ ಕುದುರೆ ಅಂತ ಪಕ್ಷಕ್ಕೆ ಸೇರಿಸಿಕೊಂಡೆವು ಆದರೆ ಪ್ರತಾಪ್ ಗೌಡ ಚೆಂಗೂಲಿ ಕುದುರೆ ಅಂತ ಜರಿದಿದ್ದಾರೆ. ಯಾವ ಪಕ್ಷ ಎಂಎಲ್‍ಎ ಮಾಡಿತ್ತೋ ಅದೇ ಪಕ್ಷಕ್ಕೆ ಚೂರಿ ಹಾಕಿ ಬಿಜೆಪಿಗೆ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಕೊಟ್ಟಿಲ್ಲ ಅದಕ್ಕೆ ಹೋಗುತ್ತೇನೆ ಅಂತ ಬಿಜೆಪಿ ಹೋಗಿದ್ದಾರೆ. ಕೇಳಿದಾಗೆಲ್ಲ ಅನುದಾನ ಕೊಟ್ಟಿದ್ದರು ದ್ರೋಹ ಮಾಡಿದ್ದಾರೆ. ಅವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಪ್ರತಾಪ್ ಗೌಡ ಅಭಿವೃದ್ಧಿ ವಿಚಾರದಲ್ಲಿ ಇಚ್ಚಾಶಕ್ತಿಯಿಲ್ಲದ ವ್ಯಕ್ತಿ, 5 ಎ ಕಾಲುವೆ ಬಗ್ಗೆ ಕೇಳಿದಾಗಲೆಲ್ಲಾ ಸುಮ್ಮನಾಗುತ್ತಿದ್ದರು. ಈಗ ಕಾಲುವೆ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಅವಧಿಯಲ್ಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಜಾರಿಗೆ ಬಂದಿವೆ. ನಂದವಾಡಗಿ ಯೋಜನೆ ಕಾಂಗ್ರೆಸ್ ಕೊಡುಗೆ. ಮುಂದೆ ನಮ್ಮ ಸರ್ಕಾರವೇ ಬರುತ್ತೆ ಬಸನಗೌಡ ತುರವಿಹಾಳ ಶಾಸಕರಾಗಿ ಇರುತ್ತಾರೆ. 5 ಎ ಕಾಲುವೆ ಯೋಜನೆ ಜಾರಿಯಾಗುತ್ತೆ ಎಂದು ತಮ್ಮ ಭಾಷಣದಲ್ಲಿ ಜಲಾಸ್ತ್ರ ಪ್ರಯೋಗಿಸಿ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡಿದರು.
ಬಿಜೆಪಿ ಸಹ ಕ್ಷೇತ್ರದಲ್ಲಿ ನಿರಂತರವಾಗಿ ಮೆರವಣಿಗೆ, ಸಮಾವೇಶಗಳ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದೆ. ಪ್ರತಾಪ್ ಗೌಡ ಪಾಟೀಲ್ ಚುನಾವಣೆಯಲ್ಲಿ ಗೆದ್ದರೆ ಕೇವಲ ಶಾಸಕರಲ್ಲ ಸಚಿವರಾಗುತ್ತಾರೆ ಅಂತಲೇ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಚಾರ ನಡೆಸಿದ್ದಾರೆ.
ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಮುಖಂಡರ ದಂಡೆ ಭಾಗವಹಿಸಿತ್ತು. ಮಸ್ಕಿ ಉಪಚುನಾವಣೆಗೆ ಪಕ್ಷ ಬಲಪಡಿಸಲು ರಾಜ್ಯಾಧ್ಯಕ್ಷರ ನಳಿನ್‍ಕುಮಾರ್ ಕಟೀಲ್, ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಪ್ರತಾಪ್ ಗೌಡ ಪಾಟೀಲ್‍ರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡುತ್ತಾ ಮತದಾರರನ್ನು ಸೆಳೆಯಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಕಳೆದ ಬಾರಿ ಕೇವಲ 213 ಮತಗಳ ಕಡಿಮೆ ಅಂತರದಲ್ಲಿ ಸೋತಿರುವ ಬಸನಗೌಡ ತುರವಿಹಾಳಗೆ ಅನುಕಂಪದ ಅಲೆಯಿದ್ದರೆ. ಮೂರು ಬಾರಿ ಶಾಸಕರಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ಕಾರಣರಾಗಿರುವ ಪ್ರತಾಪ್ ಗೌಡ ಪಾಟೀಲ್ ವಿರೋಧ ಅಲೆಯೂ ಜೋರಾಗಿದೆ. ಆದರೆ ಈ ಇಬ್ಬರ ಪಕ್ಷಗಳೂ ಸಹ ಈಗ ಬದಲಾಗಿರುವುದರಿಂದ ಜನ ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ.