ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅಭಿಮಾನಿ ಬಳಗ ದೊಡ್ಡದು. ವಿದೇಶಗಳಲ್ಲಿಯೂ ಅವರ ಫ್ಯಾನ್ಸ್ ಇದ್ದಾರೆ. ವಿಜಯ್ ಸಹ ಅಷ್ಟೇ ಪ್ರೀತಿಯನ್ನು ಅಭಿಮಾನಿಗಳಿಗೆ ತೋರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನದ ವೇಳೆ ನಡೆದ ಘಟನೆಯೇ ಸಾಕ್ಷಿಯಾಗಿದೆ.
ದಳಪಥಿ ವಿಜಯ್ ತಮ್ಮ ವಿಶಿಷ್ಟ ನಟನೆ ಮೂಲಕವೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತದೆ. ಹೀಗೆ ಇತ್ತೀಚೆಗೆ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದಾಗ ಅವರ ಅಂತಿಮ ದರ್ಶನಕ್ಕೆ ವಿಜಯ್ ಸಹ ಹೋಗಿದ್ದರು. ಈ ವೇಳೆ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಜಯ್ ಎಸ್‍ಪಿಬಿ ಅಂತಿಮ ದರ್ಶನ ಪಡೆದು ಹೊರ ಬರುತ್ತಿದ್ದ ವೇಳೆ ಹೆಚ್ಚು ಗದ್ದಲ ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಹೀಗೆ ನೂಕು ನುಗ್ಗಲ ಮಧ್ಯೆ ವಿಜಯ್ ಅವರಿಗೆ ಜಾಗ ಮಾಡಿ ಕೊಡುವ ವೇಳೆ ಅಭಿಮಾನಿಯೊಬ್ಬರ ಚಪ್ಪಲಿ ಕಾಲಿಗೆ ಸಿಕ್ಕಿಕೊಂಡು ಬಿದ್ದಿತ್ತು. ಇದನ್ನು ಕಂಡ ವಿಜಯ್ ಚಪ್ಪಲಿ ಮೇಲಕ್ಕೆ ಎತ್ತಿ ನೀಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳ ಕುರಿತು ಥಳಪತಿ ವಿಜಯ್ ಅವರಿಗೆ ಇರುವ ಪ್ರೀತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ (74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆಸಲಾಯಿತು. ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ಎಸ್‍ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎಸ್‍ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದಾರಾಬಾದ್ ನಿಂದ ಪುರೋಹಿತರ ತಂಡ ಆಗಮಿಸಿತ್ತು.