ಅಭಿಮಾನಿಗಳ ಪಾಲಿಗೆ ಅಂದು ನಾನು ಖಳನಾಯಕನಾಗಿದ್ದೆ: ಯುವರಾಜ್ ಸಿಂಗ್

Public TV
2 Min Read
yuvraj singh

– ‘ನನ್ನ ಮನೆಗೆ ಕಲ್ಲು ಎಸೆದಿದ್ದರು’

ಮುಂಬೈ: 2014ರ ಟಿ20 ವಿಶ್ವಕಪ್ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಮಾಜಿ ಆಲ್‍ರೌಂಡರ್ ಆಟಗಾರ ಯುವರಾಜ್ ಸಿಂಗ್ ಕಾರಣ ಎಂಬ ವಿಮರ್ಶೆಗಳು ಕೇಳಿ ಬಂದಿದ್ದವು. ಪಂದ್ಯದಲ್ಲಿ 21 ಎಸೆತಗಳಲ್ಲಿ ಯುವಿ ಕೇವಲ 11 ರನ್ ಗಳಿಸಿದ್ದ ಕಾರಣ ಸೋಲಿಗೆ ಪರೋಕ್ಷ ಜವಾಬ್ದಾರಿ ವಹಿಸಿಕೊಂಡಿದ್ದರು. ಶ್ರೀಲಂಕಾ 6 ವಿಕೆಟ್‍ಗಳ ಗೆಲುವು ಪಡೆದು ವಿಶ್ವಕಪ್‍ಗೆ ಮುತ್ತಿಟ್ಟು. ಇದರೊಂದಿಗೆ ಯುವರಾಜ್ ಸಿಂಗ್ ಬ್ಯಾಟಿಂಗ್ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಯುವರಾಜ್ ಸಿಂಗ್ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.

Yuvraj Singh 2

‘ಅಂದು ನಡೆದ ಪಂದ್ಯದ ಸೋಲಿನ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತಿದ್ದೇನೆ. ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಾನು ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ನಡೆಸಲಿಲ್ಲ. ಬೇರೆ ಪಂದ್ಯವಾಗಿದ್ದರೆ ಇದು ನನ್ನನ್ನು ಅಷ್ಟು ಬಾಧಿಸುತ್ತಿರಲಿಲ್ಲ. ಆ ಬಳಿಕ ನಾನು ಸಾಕಷ್ಟು ನಿದ್ದೆ ರಹಿತ ರಾತ್ರಿಗಳನ್ನು ಕಳೆದಿದ್ದೇನೆ. ನಾನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಕಣ್ಣು ನನ್ನ ಮೇಲೆಯೇ ಇತ್ತು. ಅವರು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಕಿವಿಗೆ ಹೆಡ್‍ಫೋನ್ ಹಿಡಿದುಕೊಂಡು ಅಲ್ಲಿಂದ ಆಗಮಿಸಿದ್ದೆ. ಮನೆಗೆ ಆಗಮಿಸಿದ ಬಳಿಕ ಎಲ್ಲರು ನನ್ನನ್ನು ಖಳನಾಯಕರಾಗಿ ನೋಡುತ್ತಿದ್ದರು. ನನ್ನ ನಿವಾಸದ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು. ಆಗ ನಾನು ಅಭಿಮಾನಿಗಳಿಗೆ ಮೋಸ ಮಾಡಿದೆ ಎಂಬ ಭಾವನೆ ಉಂಟಾಗಿತ್ತು. ನಾನು ಯಾರನ್ನೋ ಕೊಲೆ ಮಾಡಿ ಜೈಲಿಗೆ ಹೋಗುತ್ತಿದ್ದ ಅನುಭವ ಉಂಟಾಗಿತ್ತು. ಸಾಕಷ್ಟು ಸಮಯದ ಬಳಿಕ ನಾನು ಅದರಿಂದ ಹೊರ ಬಂದಿದೆ ಎಂದು ಯುವಿ ಹೇಳಿದ್ದಾರೆ.

Yuvraj Singh 6 sixes A

2007ರ ಟಿ20, 2011ರ ಏಕದಿನ ವಿಶ್ವಕಪ್‍ಗಳನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಎರಡು ಟೂರ್ನಿಗಳಲ್ಲಿ ಯುವಿ ನೀಡಿದ್ದ ಆಲ್‍ರೌಂಡ್ ಪ್ರದರ್ಶನದಿಂದ ಪ್ಲೇಯರ್ ಆಫ್ ಸೀರಿಸ್ ಆಗಿ ಹೊರಹೊಮ್ಮಿದ್ದರು. ಪ್ರಮುಖವಾಗಿ 2007ರ ಟಿ20 ವಿಶ್ವಕಪ್‍ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಮಿಂಚಿದ್ದರು. 2011ರ ವಿಶ್ವಕಪ್ ಬಳಿಕ ಕ್ಯಾನ್ಸರ್ ಗೆ ತುತ್ತಾಗಿ ಲಂಡನ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಿದ್ದರೂ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಟೀಂ ಇಂಡಿಯಾ ಪರ ಯುವಿ 304 ಏಕದಿನ, 40 ಟೆಸ್ಟ್, 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

yuvraj singh

Share This Article
Leave a Comment

Leave a Reply

Your email address will not be published. Required fields are marked *