– ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ನಡೆಗೆ ಮೆಚ್ಚುಗೆ
ನವದೆಹಲಿ: ಕ್ರಿಕೆಟ್ ಮೈದಾನದ ಒಳಗೆ ಹಾಗೂ ಹೊರಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ ಬದ್ಧ ವೈರಿಗಳು. ಆದರೆ ಅಫ್ರಿದಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಗೌತಮ್ ಗಂಭೀರ್ ಅವರ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರ ಸಾವು, ನೋವಿಗೆ ಖುಷಿಪಡುವ ಸಂಸ್ಕೃತಿ ಭಾರತೀಯರಿಗೆ ಇಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಹಿದ್ ಅಫ್ರಿದಿಗೆ ಕೊರೊನಾ ಪಾಸಿಟಿವ್
“ಶಾಹಿದ್ ಆಫ್ರಿದಿ ಅಷ್ಟೇ ಅಲ್ಲ ಯಾರೂ ಕೊರೊನಾ ವೈರಸ್‍ಗೆ ಒಳಗಾಗಬಾರದು. ಶಾಹಿದ್ ಅಫ್ರಿದಿ ಅವರೊಂದಿಗೆ ನನಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ದೇಶದ ಪ್ರತಿಯೊಬ್ಬ ಕೊರೊನಾ ಸೋಂಕಿತ ಆದಷ್ಟು ಬೇಗ ಗುಣಮುಖರಾಗಬೇಕು” ಎಂದು ಗಂಭೀರ್ ಹೇಳಿದ್ದಾರೆ.
“ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನರ ಬಗ್ಗೆ ಚಿಂತಿಸಬೇಕಾಗಿದೆ. ಪಾಕಿಸ್ತಾನವು ಭಾರತಕ್ಕೆ ಸಹಾಯ ಮಾಡಲು ಮುಂದಾಗಿತ್ತು. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದರೆ ಅವರು ಮೊದಲು ತಮ್ಮ ದೇಶದ ಜನರಿಗೆ ಸಹಾಯ ಮಾಡುವುದು ಅಗತ್ಯವಿದೆ. ಅಷ್ಟೇ ಅಲ್ಲದೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿ” ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ಈವರೆಗೂ 1.30 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 50 ಸಾವಿರಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದರೆ, ಸುಮಾರು 2,500 ರೋಗಿಗಳು ಮೃತಪಟ್ಟಿದ್ದಾರೆ.