ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

Public TV
2 Min Read
Afghanistan

– ಭಾರತ ತಲುಪಿದ ಅಫ್ಘಾನಿಸ್ತಾನದಲ್ಲಿದ 129 ಜನರು
– ತಾಲಿಬಾನಿಗಳಿಗೆ ಶಸ್ತ್ರಾಸ್ತ್ರ ಹಸ್ತಾಂತರಿಸಿದ ಪೊಲೀಸರು
– ದೆಹಲಿ ತಲುಪಿದ ಬಳಿಕ ಕಣ್ಣೀರಿಟ್ಟ ಮಹಿಳೆ

ಕಾಬುಲ್: ಅಫ್ಘಾನಿಸ್ತಾನ ತಾಲಿಬಾಲಿಗಳ ಕೈ ವಶವಾಗಿದ್ದು, ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರೂಲ್ಲಾಹ ಸಾಲೇಹ ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ. ಅಶ್ರಫ್ ಗನಿ ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದು, ಸಾಲೇಹ ಅವರ ನಡೆ ಬಗ್ಗೆ ತಿಳಿದು ಬಂದಿಲ್ಲ. ಈಗಾಗಲೇ ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ವಶಕ್ಕೆ ಪಡೆದುಕೊಂಡಿರುವ ತಾಲಿಬಾನಿಗಳು ತಮ್ಮ ಧ್ವಜ ಹಾರಿಸಿದ್ದಾರೆ.

ತಾಲಿಬಾನಿಗಳು ಹೇಳುವಂತೆ ಈಗಾಗಲೇ ಅಲ್ಲಿಯ ಪೊಲೀಸರು ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಯಾರು ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿದ್ದು, ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ.

Afghanistan 1

ಯಾರು ಈ ಮುಲ್ಲಾ ಬರಾದರ್?:
ಸದ್ಯ ಈ ಮುಲ್ಲಾ ಬರದಾರ್ ಕತಾರ್ ನಲ್ಲಿದ್ದಾನೆ. ಕತಾರ್ ನಲ್ಲಿರುವ ತಾಲಿಬಾನ್ ಕಚೇರಿಯ ರಾಜಕೀಯ ಮುಖ್ಯಸ್ಥನಾಗಿರೋದರಿಂದ, ಮುಲ್ಲಾ ಬರಾದರ್ ಹೆಸರು ಸ್ಪರ್ಧೆಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಸಹ ಸ್ಥಾಪಕನಾಗಿದ್ದಾನೆ.

ಮುಲ್ಲಾ ಬರಾದರ್ ಜೊತೆ ನಾಲ್ಕು ಹೆಸರು:
ಮುಲ್ಲಾ ಬರಾದರ್ ಹೆಸರಿನ ಜೊತೆ ಹೆಬತುಲ್ಲಾಹ ಅಖುಂದಜಾದ್, ಸಿರಾಜುದ್ದೀನ್ ಹಕ್ಕನಿ ಮತ್ತು ಮುಲ್ಲಾ ಯಾಕೂಬ್ ಸಹ ಗದ್ದುಗೆಯ ಸ್ಪರ್ಧೆಯಲ್ಲಿದ್ದಾರೆ. ಹೆಬತುಲ್ಲಾಹ ತಾಲಿಬಾನಿಗಳ ಸುಪ್ರೀಂ ನಾಯಕನಾದ್ರೆ, ಸಿರಾಜುದ್ದೀನ್ ಎರಡನೇ ಸ್ಥಾನದಲ್ಲಿರುವ ಲೀಡರ್. ಈತ ಹಕ್ಕಾನಿ ನೆಟ್‍ವರ್ಕ್ ಸಂಚಾಲಕನಾಗಿದ್ದು, ಹಲವು ಸಂಘಟನೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇನ್ನೂ ಮುಲ್ಲಾ ಯಾಕೂಬ್ ತಾಲಿಬಾನ್ ಸ್ಥಾಪಕರಲ್ಲೊಬ್ಬರಾದ ಮುಲ್ಲಾ ಉಮರ್ ಪುತ್ರನಾಗಿದ್ದಾನೆ. ತಾಲಿಬಾನ್ ದ ಜಂಗಜೂ ಯುನಿಟಿ ಈತನ ಕೈ ವಶದಲ್ಲಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಇಂದು ರಾತ್ರಿ ಸುಮಾರು 10 ಗಂಟೆಗೆ 129 ಪ್ರಯಾಣಿಕರಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶದ ಜನರನ್ನು ಏರ್ ಲಿಫ್ಟ್ ಮೂಲಕ ಕರೆಸಿಕೊಳ್ಳುತ್ತಿವೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

ಇದು ಅಶ್ರಫ್ ಘನಿ ದ್ರೋಹ:
ಇಂದು ದೆಹಲಿ ತಲುಪಿರುವ ಅಫ್ಘಾನಿಸ್ತಾನದ ಮಾಜಿ ಸಂಸದ ಜಮೀಲ್ ಕರ್ಜಾಯಿ, ನಾವು ಕಾಬುಲ್ ತೊರೆದಾಗ ಇಡೀ ನಗರ ತಾಲಿಬಾನಿಗಳ ವಶದಲ್ಲಿತ್ತು. ಇಂದಿನ ಸ್ಥಿತಿಗೆ ಅಶ್ರಫ್ ಘನಿ ಕಾರಣ. ಆತ ಮಾಡಿದ ದ್ರೋಹವನ್ನು ಜನ ಮರೆಯಲ್ಲ. ಮುಂದೆ ಏನು ಆಗುತ್ತೆ ಅನ್ನೋದು ತಿಳಿಯುತ್ತಿಲ್ಲ. ತಾಲಿಬಾನಿಗಳು ಬದಲಾಗಿದ್ದಾರಾ ಅಥವಾ ಮೊದಲಿನಂತೆಯೇ ಇದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ವಶ – ತಾಲಿಬಾನ್‍ಗೆ ಶರಣಾದ ಅಫ್ಘನ್ ಸರ್ಕಾರ

ಕಣ್ಣೀರಿಟ್ಟ ಮಹಿಳೆ:
ದೆಹಲಿ ತಲುಪಿದ ಜನರು ಅಲ್ಲಿಯ ಕರಾಳತೆಯನ್ನು ಹೇಳುತ್ತಿದ್ದಾರೆ. ತಾಲಿಬಾನಿಗಳ ಕ್ರೌರ್ಯ ಹೇಳುತ್ತಿರುವ ಜನರು ಇನ್ನೂ ಆತಂಕದಲ್ಲಿರೋದು ಕಾಣಿಸುತ್ತಿದೆ. ಮಾಧ್ಯಮಗಳ ಮುಂದೆ ಬಂದ ಓರ್ವ ಮಹಿಳೆ, ಅಲ್ಲಿ ನಮ್ಮ ಮೇಲಿನ ದೌರ್ಜನ್ಯ ಯಾರೂ ಪ್ರಶ್ನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಂಪೂರ್ಣ ಸ್ವಾತಂತ್ರದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಕಣ್ಣೀರಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *