– ಅಪ್ರಾಪ್ತೆ ಸಾವು, ಗಂಭೀರ ಸ್ಥಿತಿಯಲ್ಲಿ 2 ಮಕ್ಕಳ ತಂದೆ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪೈದೊಡ್ಡಿಯಲ್ಲಿ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನೆಯಲ್ಲಿ 17 ವರ್ಷದ ಹುಡುಗಿ ಸಾವನ್ನಪ್ಪಿದ್ದು, ಯರಜಂತಿ ಗ್ರಾಮದ ನರಸಪ್ಪನ ಸ್ಥಿತಿ ಗಂಭೀರವಾಗಿದೆ. ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೂ ಈತ ಅಪ್ರಾಪ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಈ ಪ್ರೇಮ ಸಂಬಂಧಕ್ಕೆ ಮನೆಯಲ್ಲಿ ವಿರೋಧ ಮಾಡಿದ ಹಿನ್ನೆಲೆ ಇಬ್ಬರೂ ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತೆಯೇ ವಿಷ ಸೇವನೆ ಮಾಡಿದ್ದಾರೆ. ಪರಿಣಾಮ ಹುಡುಗಿ ಸಾವನ್ನಪ್ಪಿ, ಅಂಕಲ್ ಪಾರಾಗಿದ್ದಾನೆ.
ಈ ಹಿಂದೆ ಅಪ್ರಾಪ್ತೆಯನ್ನ ನರಸಪ್ಪನಿಂದ ದೂರ ಮಾಡಿ ಮಹಿಳಾ ಸಾಂತ್ವ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿಂದ ಹೊರಬಂದ ಅಪ್ರಾಪ್ತೆ ನರಸಪ್ಪನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ನಮ್ಮ ಹಣ, ಎಟಿಎಂನಲ್ಲಿರುವ ಉಂಗುರ ನನ್ನ ಮಕ್ಕಳಿಗೆ ಕೊಡಿ. ಮುಂದಿನ ಜನ್ಮದಲ್ಲಿ ನಾವಿಬ್ಬರು ಗಂಡ ಹೆಂಡತಿಯಾಗುತ್ತೇವೆ ಎಂದು ಚೀಟಿ ಬರೆದು ವಿಷ ಸೇವನೆ ಮಾಡಿದ್ದಾರೆ.
ಕೈ ಮೇಲೆ ಒಬ್ಬರಿಗೊಬ್ಬರು ಹೆಸರುಗಳನ್ನ ಬರೆದುಕೊಂಡು ವಿಷ ಸೇವನೆ ಮಾಡಿದ್ದಾರೆ. ನರಸಪ್ಪನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.