– ಐದು ಸಾವಿರಕ್ಕೂ ಅಧಿಕ ಹಣ ನೀಡಿದ ಸಹೋದರಿಯರು
– ಚಿಣ್ಣರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ
ಶಿವಮೊಗ್ಗ: ದೇಶಾದ್ಯಂತ ಜನ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಇದೆ ಹಾದಿಯಲ್ಲಿ ಸಾಗಿರುವ ಸಹೋದರಿಯರಿಬ್ಬರು ಅಪ್ಪ, ಅಮ್ಮ ಕೊಟ್ಟ ಹಣವನ್ನೆಲ್ಲ ಕೂಡಿಟ್ಟು ಇದೀಗ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.
Advertisement
ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯ ಶಂಕರ್ ಮತ್ತು ನೇತ್ರಾವತಿಯ ದಂಪತಿಯ ಪುತ್ರಿಯರಾದ ಛಾಯಾಶ್ರೀ ಹಾಗೂ ಅನುಶ್ರೀ ದೇಣಿಗೆ ನೀಡಿರುವ ಸಹೋದರಿಯರು. ತಮ್ಮ ಹುಟ್ಟುಹಬ್ಬಕ್ಕೆ ಖರ್ಚಿಗೆಂದು ಅಪ್ಪ ಅಮ್ಮ ನೀಡಿದ ಹಣ ಮತ್ತು ಆಗಾಗ ಇತರೆ ವಸ್ತುಗಳ ಖರೀದಿ ಮತ್ತು ಖರ್ಚಿಗಾಗಿ ಹೆತ್ತವರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದರು. ಚಿಲ್ಲರೆ ಹಣವನ್ನು ಸಣ್ಣದೊಂದು ಅಕ್ವೇರಿಯಂನಲ್ಲಿ ಸಂಗ್ರಹಿಸಿ, ನೋಟುಗಳನ್ನು ಹುಂಡಿಯಲ್ಲಿ ಹಾಕಿ ಭದ್ರ ಮಾಡಿದ್ದರು. ಇದೀಗ ರಾಮ ಮಂದಿರಕ್ಕೆ ನಿಧಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
Advertisement
Advertisement
ತಂದೆ ಶಂಕರ್ ಜೀವನ ನಿರ್ವಹಣೆಗಾಗಿ ಪೈಂಟರ್ ಕೆಲಸ ಮಾಡುತ್ತಿದ್ದರೆ ತಾಯಿ ನೇತ್ರಾವತಿ ಗೃಹಿಣಿಯಾಗಿದ್ದು, ಛಾಯಾಶ್ರೀ ಹಾಗೂ ಅನುಶ್ರೀ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಜೊತೆಗೆ ತಮಗೆ ಬೇಕಾದಾಗ ಖರ್ಚು ಸಹ ಮಾಡುತ್ತಿದ್ದರು. ಆದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂಬ ವಿಷಯ ತಿಳಿದ ಮೇಲೆ ಅಂದಿನಿಂದ ಈ ಚಿಣ್ಣರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು ಎಂದು ನಿರ್ಧರಿಸಿ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿದ್ದರು.
Advertisement
ಇದುವರೆಗೆ ಐದು ಸಾವಿರಕ್ಕೂ ಅಧಿಕ ಹಣ ಸಂಗ್ರಹಿಸಿದ್ದು ಈ ಹಣವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅರ್ಪಣೆ ಮಾಡಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಸಚಿವ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.