– ನನ್ನಿಂದಾಗಿ ಅಮ್ಮ ರೈಲು ಕಂಬಿ ಮೇಲೆ ಮಲಗಿದ್ದಳು
– ನನ್ನ ಬದುಕಲ್ಲಿ ನಡೆದ್ದಿದ್ದೆಲ್ಲಾ ರಾಯರ ಪವಾಡ
ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಸಿನಿ ಜರ್ನಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರು ಇದೀಗ ತಮ್ಮ ಅಪ್ಪ- ಅಮ್ಮನ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.
ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿ ಬರೆದುಕೊಂಡಿರುವ ಜಗ್ಗೇಶ್, ಹಿರಿ ಅಕ್ಕನಿಗೆ ಸಿಕ್ಕ ಕಳೆದು ಹೋಗಿದ್ದ ಅಮ್ಮ-ಅಪ್ಪನ ಜೊತೆಯಿದ್ದ ಅಪರೂಪದ ಚಿತ್ರ. ಇಬ್ಬರು ಹೀಗೆ ಒಟ್ಟಿಗೆ ಕೂತು ದಿನನಿತ್ಯ ಭಕ್ತಿಯಿಂದ ಶಿವಪೂಜೆ ಮಾಡುತ್ತಿದ್ದರು. ಸ್ನೇಹಿತರ ಸಹವಾಸ ದೋಷದಿಂದ ನಾನು ಅಪಾಪೋಲಿಯಂತೆ ಹೊಡೆದಾಟ, ಬಡಿದಾಟ ಮಾಡುತ್ತಾ ತಿಂಗಳುಗಟ್ಟಲೆ ಮನೆ ಸೇರದೆ ಹೊರ ಉಳಿಯುತ್ತಿದ್ದೆ. ಇಂತಹ ಅಮಾಯಕ ತಂದೆ-ತಾಯಿಗೆ ಅಪವಾದದ ಮಗನಾಗಿ ಬಿಟ್ಟಿದ್ದೆ. ಹಿರಿಯ ಮಗನಾಗಿ ದಾರಿತಪ್ಪಿದೆ.
ಅಪ್ಪ ದೇವರ ಮುಂದೆ ಜೋರಾಗಿ ದೇವರೇ ಇಂತಹ ಮಗನ ಯಾಕೆ ಕೊಟ್ಟೆ? ನೀನು ದೇವರೇ ಆದರೆ ಇವನಿಗೆ ಸಾವು ಕೊಡು ಎಂದು ಬೇಡುತ್ತಿದ್ದನು. ಅಮ್ಮನಿಗೆ ಮಾತ್ರ ನನ್ನ ಮೇಲೆ ಅಪಾರವಾದ ನಂಬಿಕೆ ಪ್ರೀತಿ. ಆದರೂ ಯಾಕೋ ಒಂದು ದಿನ ಅಪ್ಪ ಬೈಯುವುದು ಕೇಳಿ ರೋಸಿ ಹೋಗಿ ರೈಲಿನ ಕಂಬಿಯ ಮೇಲೆ ಮಲಗಿಬಿಟ್ಟಳು. ಆ ಕ್ಷಣ ಈಗ ನೆನೆದರೂ ಜೀವ ಹೋದಂತೆ ಭಯವಾಗುತ್ತದೆ. ಇದನ್ನೂ ಓದಿ: ಮರೆಯಲಾಗದಂತಹ ನೈಜ ಘಟನೆ ಹಂಚಿಕೊಂಡ ಜಗ್ಗೇಶ್
ದಯಮಾಡಿ ಕ್ಷಮಿಸು ನಿನ್ನ ಮಾತಿನಂತೆ ಬದುಕುವೆ ಎಂದು ಅಂದು ಅಮ್ಮನಿಗೆ ರೈಲ್ವೆ ಕಂಬಿಯ ಮೇಲೆ ಮಾತುಕೊಟ್ಟೆ. ಆಗ ಅಮ್ಮ ಶಿವಲಿಂಗದ ಮುಂದೆ ಕೂರಿಸಿ ಯಾವ ತಪ್ಪು ಮಾಡುವುದಿಲ್ಲ ಎಂದು ಆಣೆ ಭಾಷೆ ಪಡೆದು, ನನಗೆ 500ರೂ ಕೊಟ್ಟು ಮಂತ್ರಾಲಯಕ್ಕೆ ಕಳಿಸಿಬಿಟ್ಟಳು. 1980ರ ಫೆಬ್ರವರಿ ಮಂತ್ರಾಲಯದಲ್ಲಿ 3 ತಿಂಗಳು ಇದ್ದುಬಿಟ್ಟೆ. ಮುಂದೆ ನನ್ನ ಬದುಕಲ್ಲಿ ನಡೆದ್ದಿದ್ದೆಲ್ಲಾ ರಾಯರ ಪವಾಡ. ಆದರೆ ಮಗನ ಯಶಸ್ಸು ನೋಡುವ ಅದೃಷ್ಟ ಅನುಭವಿಸುವ ಯೋಗ ಅಪ್ಪನಿಗೆ ಸಿಕ್ಕಿತು. ಇದನ್ನೂ ಓದಿ: ನವರಸ ನಾಯಕ ಜಗ್ಗೇಶ್ ಸಿನಿ ಪಯಣಕ್ಕೆ 40 ವರ್ಷ
ನನ್ನ ತಾಯಿ ದೇವರಿಗೆ ಆ ಅದೃಷ್ಟ ದೇವರು ಕೊಡದೆ ಕರೆದುಕೊಂಡು ಅವನೂರಿಗೆ ಹೋಗಿಬಿಟ್ಟ. ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು ಅನ್ನಿಸುತ್ತದೆ. ನಿತ್ಯ ನಿರಂತರ 57 ತುಂಬಿದ ಮಗನಿಗೆ. ತಂದೆ-ತಾಯಿ ಜಗದಲ್ಲಿ ನಿಜದೇವರು ಮಿಕ್ಕ ದೇವರು ತಂದೆ- ತಾಯಿಯ ಪ್ರತಿಬಿಂಬ ಮಾತ್ರ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: I miss u ಅಪ್ಪಾ..- ತಂದೆಯ ಕೊನೆಯ ವಿಡಿಯೋ ಹಂಚಿಕೊಂಡ ಜಗ್ಗೇಶ್
ಜಗ್ಗೇಶ್ ಸಹೋದರ ಕೋಮಲ್ ಮದುವೆ ನೋಡಬೇಕು ಎಂದು ಅವರ ತಾಯಿ ಕೋರಿಕೊಂಡಿದ್ದರು. ಅಂತೆಯೇ ತಾಯಿಯ ಆಸೆಯಂತೆ ಒಂದು ವಾರದಲ್ಲಿಯೇ ಸ್ನೇಹಿತನೊಬ್ಬನ ತಂಗಿಯನ್ನು ಒಪ್ಪಿಸಿ ಮದುವೆ ಮಾಡಿಕೊಡಲಾಗಿತ್ತು. ಆ ಸಂದರ್ಭದಲ್ಲಿ ಕೋಮಲ್ ಗೆ ಕೇವಲ 20 ವರ್ಷ ವಯಸ್ಸಾಗಿತ್ತು. ದುರಾದೃಷ್ಟವಶಾತ್ ಕೋಮಲ್ ಮದುವೆಯಾದ ಕೇವಲ 20 ದಿನದಲ್ಲೇ ಜಗ್ಗೇಶ್ ತಾಯಿ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಅಮ್ಮ ನನ್ನ ಬಿಟ್ಟು ಹೋಗಿ ಇಂದಿಗೆ 26 ವರ್ಷ: ಜಗ್ಗೇಶ್
View this post on Instagram