– ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗುವುದಿಲ್ಲವೇ?
– ಎರಡು ನಾಲಿಗೆ ಇರಬಾರದು
ಬೆಂಗಳೂರು: ರೈತರ ಹೋರಾಟದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರು, ರೈತರು, ಕಾರ್ಮಿಕರಿಗೆ ಅನ್ಯಾಯವಾದರೆ ಅವರ ಪರವಾಗಿ ನಾವು ಧ್ವನಿ ಎತ್ತುತ್ತೇವೆ. ಇಂದು ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದ್ದು, ಈ ಹೊರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದರು.
Advertisement
Advertisement
ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅಪ್ಪ, ಅಣ್ಣ ರೈತರ ಪರ ಅಂತಾರೆ. ಆದರೆ ಕುಮಾರಸ್ವಾಮಿ ಮಾತ್ರ ಸರ್ಕಾರದ ಪರ ಕಾನೂನುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಭೂಮಿ ಕೃಷಿಕರಿಗಾಗಿಯೇ ಮೀಸಲಿರಬೇಕು ಎಂಬುದು ಕಾನೂನಿನಲ್ಲಿದೆ. ಈಗ ಈ ತಿದ್ದುಪಡಿಗೆ ಬೆಂಬಲ ನೀಡುತ್ತಿದ್ದೀರಲ್ಲ ಇದು ಸರಿನಾ, ನಾಚಿಕೆ ಆಗುವುದಿಲ್ಲವೇ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದ್ದಾರೆ.
Advertisement
ಮಣ್ಣಿನ ಮಕ್ಕಳು, ರೈತರ ಮಕ್ಕಳು ಅಂತಾರೆ, ನಾವೆಲ್ಲ ಯಾರ ಮಕ್ಕಳು? ನಾಲಿಗೆ ಒಂದೇ ಇರಬೇಕು. ರೈತರ ಪರ, ಇಲ್ಲ ವಿರೋಧ ಮಾಡಬೇಕು. ಒಂದೇ ನಿಲುವು ಇರಬೇಕು. ನಾಲಿಗೆ ಒಂದೇ ತರಹ ಇರಬೇಕು, ಎರಡು ರೀತಿ ಇರಬಾರದು. ಕುಮಾರಸ್ವಾಮಿ ಹತ್ತಿರ ಬೇನಾಮಿ ಜಮೀನು ಇದೆ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ.
Advertisement
ಸಿಎಂ ಯಡಿಯೂರಪ್ಪ, ಸಚಿವ ಅಶೋಕ್ ಸುಮ್ಮನೇ ಹಣ ಮಾಡಿದ್ದಾರಾ, ಬೆಂಗಳೂರಿನ ಸುತ್ತಲಿನ ಬೇನಾಮಿ ಜಾಗಗಳ ಕೇಸ್‍ಗಳ ಖುಲಾಸೆ ಮಾಡಿದ್ದೀರಾ. ರೈತರ ಹೆಸರಲ್ಲಿ ಪ್ರಮಾಣವಚನ ತಗೊಂಡು ಹೀಗೆ ಮಾಡಲು ನಾಚಿಕೆ ಆಗಲ್ಲವೇ, ಇಂದು ರೈತರ ವಿರುದ್ಧವಾಗಿ ನಿಲ್ಲುವುದು ಸರಿನಾ? ಇದು ಕೇಂದ್ರದ ನಿರ್ಧಾರ. ಮಸೂದೆಗಳು ರಾಜ್ಯ ಮಾಡಿದಲ್ಲ ಕೇಂದ್ರ ಸರ್ಕಾರ ಮಾಡಿದ್ದು. ಅಮಿತ್ ಶಾ ಅವರಿಗೆ ಕಾರ್ಪೋರೆಟ್ ಬಾಡಿಗಳು ಮನವಿ ಮೇರೆಗೆ ಕಾನೂನು ಜಾರಿಗೆ ತರಲಾಗಿದೆ. ಅಮಿತ್ ಶಾ ಪತ್ರ ಬರೆದು ರಾಜ್ಯಗಳಿಗೆ ಸೂಚನೆ ಕೊಟ್ಡಿದ್ದಾರೆ. ನೀವು ಗುಲಾಮರಾ, ಇದು ಸ್ಟೇಟ್ ಆಕ್ಟ್ ಎಂದು ಗುಡುಗಿದರು.
ಕೇಂದ್ರ ವಿತ್ತ ಸಚಿವೆ ಸೀತಾರಾಮನ್ ಅವರು ಎಪಿಎಂಸಿ ಮಾರುಕಟ್ಟೆ ರದ್ದಿಗೆ ಸಕಾಲ ಎಂದಿದ್ದಾರೆ. ಖಾಸಗಿ ಕಂಪನಿಗಳು ಮಾರುಕಟ್ಟೆ ಮಾಡಲು ಅವಕಾಶ ಕೊಟ್ಟಿದ್ದಾರೆ. ರೈತರಿಗೆ ಒಂದೆರಡು ಮಾರುಕಟ್ಟೆಗಳಲ್ಲಿ ಬೆಲೆ ಬರುತ್ತೆ. ಅಮೇಲೆ ರೈತರಿಗೆ ನ್ಯಾಯ ಸಿಗಲ್ಲ. ಬಂಡವಾಳ ಶಾಹಿಗಳ ಬಳಿ ರೈತರು ತಲೆ ಬಾಗಿಸಬೇಕಾ, ಎಂಎನ್‍ಸಿ ಹೇಳಿದ ಬೆಲೆಗೆ ಬೆಳೆ ಕೊಡಬೇಕಾಗುತ್ತದೆ. ಈಗ ಇಡೀ ದೇಶದ ರೈತ ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ರೈತರು 42 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಬೆಳೆದಿದ್ದಾರೆ. ಕೇಂದ್ರ ಸರ್ಕಾರ 1,850 ರೂ. ಎಂಸಿ ಘೋಷಣೆ ಮಾಡಿದೆ. ನಿಮಗೆ ನಾಚಿಕೆ ಆಗಲ್ವಾ, 25 ಜನ ಸಂಸದರು ಕಳಿಸುತ್ತೇವೆ. ಬೆಂಬಲ ಬೆಲೆ ಇಲ್ಲದೇ ರೈತ ಏನು ಮಾಡಬೇಕು ಎಂದು ಕಿಡಿಕಾರಿದರು.
ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ಶೇ.75 ರಷ್ಟು 5 ಎಕರೆಗಿಂತ ಕಡಿಮೆ ಭೂಮಿ ಇರುವ ಸಣ್ಣ, ಅತೀ ಸಣ್ಣ ರೈತರಿದ್ದಾರೆ. ಇವರೆಲ್ಲ ಭೂಮಿ ಮಾರಿಕೊಂಡು ಕೂಲಿ ಮಾಡಬೇಕಾಗುತ್ತದೆ. ರೈತನ ರಸ್ತೆಗೆ ಯಾಕೆ ತರುತ್ತೀರಿ. ದೇವರಾಜ್ ಅರಸ್ ಅವರು ಉಳುವವನೇ ಭೂಮಿ ಒಡೆಯ ಎಂದರು. ಆದರೆ ಈಗ ಯಡಿಯೂರಪ್ಪ ಉಳ್ಳವನೇ ಭೂಮಿ ಒಡೆಯ ಅಂತಾ ಮಾಡಿದ್ದಾರೆ. ನಾಚಿಕೆ ಆಗುವುದಿಲ್ಲವೇ ಯಡಿಯೂರಪ್ಪ ಎಂದು ಪ್ರಶ್ನಿಸಿದರು.
ಈಗ ಹೋರಾಟ ಬಿಟ್ಟರೆ ಬೇರೆ ದಾರಿಯೇ ಇಲ್ಲ. ಕಾಂಗ್ರೆಸ್ ನಿಮ್ಮ ಜೊತೆ ಇದೆ. ಈ ಹೋರಾಟ ನಿಲ್ಲಬಾರದು. ಗೋಹತ್ಯೆ ನಿಷೇಧ ಕಾಯ್ದೆ ತಂದರು. ನಮಗೆ ಕಾಯ್ದೆ ಪ್ರತಿ ಸಹ ನೀಡಲಿಲ್ಲ. ಈಗ ಕಾಯ್ದೆ ಏನು ಮಾಡಿದ್ದಾರೆ ನೋಡಬೇಕಿದೆ. ಇದನ್ನು ಸಹಿಸಿಕೊಳ್ಳಬೇಕಾ? ಓಟ್ ಗಾಗಿ ಈ ರೀತಿ ಮಾಡುತ್ತಿದ್ದಾರೆ. ರೈತರಿಗೆ ಈ ಕಾಯ್ದೆಯಿಂದ ಹೊಡೆತ ಬೀಳಲಿದೆ. ಆರ್‍ಎಸ್‍ಎಸ್ ನವರು ಒಂದು ದಿನವೂ ಗಂಜಲು ಎತ್ತಿಲ್ಲ. ಅಲ್ಲದೆ ನಿಮ್ಮನ್ನು ಡೋಂಗಿ ಎಂದು ಹೇಳಿದವರು ರೈತ ಕೆಲಸ ಮಾಡಿಲ್ಲ. ಅವರ ಅಪ್ಪ ರೈತನಾಗಿ ಕೆಲಸ ಮಾಡಿರಬಹುದು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಈಗಲೇ ದೇಶದಲ್ಲಿ ಭಾರಿ ಸಂಕಷ್ಟಗಳಿವೆ. ಸದ್ಯ ಮೇವು ಇಲ್ಲ, ಎತ್ತು, ಎಮ್ಮೆ, ಹಸುಗಳಿಗೆ ವಯಸ್ಸಾದರೆ ಏನು ಮಾಡುವುದು? ಈಗ ನಿಷೇಧದಿಂದಾಗಿ ಮತ್ತೆ ಎತ್ತುಗಳನ್ನು ಮೇವಿಗೆ ಎಲ್ಲಿ ಕಳಿಸಬೇಕು. ಗೋ ಶಾಲೆಗೆ ಕಳಿಸಿದರೆ ಸರ್ಕಾರಕ್ಕೆ ದುಡ್ಡು ಕೊಡಬೇಕು. ನಮಗೆ ಉಳಲು ಸಹ ಆಗುವುದಿಲ್ಲ. ಈಗ ರೈತರಿಗೆ ದೊಡ್ಡ ಸಮಸ್ಯೆ ಆಗಲಿದೆ ಎಂದರು. ಸಿದ್ದರಾಮಯ್ಯ ಭಾಷಣ ಮುಗಿಯುತ್ತಿದ್ದಂತೆ ರಾಜಭವನ ಮುತ್ತಿಗೆಗೆ ರೈತರು ನಿರ್ಧರಿಸಿದ್ದಾರೆ. ರಾಜಭವನ ಚಲೋ ಮಾಡಲಿದ್ದಾರೆ.