– 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ
ಚಿಕ್ಕಮಗಳೂರು: ಫಸ್ಟ್ ಪ್ರೈಸ್ 30 ಕೆಜಿ ತೂಕದ 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ. ಸೆಕೆಂಡ್ ಪ್ರೈಸ್ 6 ನಾಟಿ ಕೋಳಿ, 1 ಬಾಟಲಿ ಡ್ರಿಂಕ್ಸ್, 1 ಕೇಸ್ ಬಿಯರ್. ಥರ್ಡ್ ಹಾಗೂ ಸಮಾಧಾನಕರ ಬಹುಮಾನ ಎಲ್ಲರಿಗೂ ಸವೆನ್ ಅಪ್. ಅಪರೂಪದ ಬಹುಮಾನಗಳುಳ್ಳ ಕಾಫಿನಾಡ ವಿಭಿನ್ನ ಕ್ರಿಕೆಟ್ ಟೂರ್ನಿಮೆಂಟ್ ರದ್ದಾಗಿದೆ.
ಟೂರ್ನಾಮೆಂಟ್ ಗೆ ಬಂದ ತಂಡಗಳ ಸಂಖ್ಯೆ ಕಂಡು ಆಯೋಜಕರೇ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಈ ರೀತಿಯ ರೇರ್ ಟೂರ್ನಿ ಆಯೋಜಿಸಲಾಗಿತ್ತು. ಆದರೆ ಕ್ರಿಕೆಟ್ ತಂಡಗಳು ಎದ್ವಾ-ತದ್ವಾ ಮುಗಿಬಿದ್ದಿದ್ದರಿಂದ ಆಯೋಜಕರೇ ತಾತ್ಕಾಲಿಕವಾಗಿ ಟೂರ್ನಿಯನ್ನ ಕೈಬಿಟ್ಟಿದ್ದಾರೆ.
ಒಂದೇ ದಿನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 400ಕ್ಕೂ ಹೆಚ್ಚು ತಂಡಗಳು ಫೋನ್ ಮಾಡಿ ಹೆಸರು ನೊಂದಾಯಿಸಲು ಮುಂದಾಗಿದ್ದವು. ಇದರಿಂದ ಗೊಂದಲಕ್ಕೀಡಾದ ಆಯೋಜಕರು ತಾತ್ಕಾಲಿಕವಾಗಿ ಪಂದ್ಯಾವಳಿಯನ್ನ ಮುಂದೂಡಿದ್ದಾರೆ. ಟೂರ್ನಿಮೆಂಟ್ ಸ್ಥಗಿತಗೊಂಡಿರೋದ್ರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿದೆ.