ಶಿವಮೊಗ್ಗ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಕೆರೆಗೆ ಉರುಳಿ ಬಿದ್ದಿದ್ದು, ಸ್ಕೂಟಿ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ನಡೆದಿದೆ.
ದೀಪು ಮೃತನಾಗಿದ್ದಾನೆ. ಶಿವಮೊಗ್ಗ ಗಾಂಧಿ ಬಜಾರಿನ ನಿವಾಸಿಯಾಗಿದ್ದಾನೆ. ಇಂದು ಮುಂಜಾನೆ ಶಿವಮೊಗ್ಗ ಘಟಕಕ್ಕೆ ಸೇರಿದ ಬಸ್ ಸಾಗರದಿಂದ ವಾಪಸ್ ಶಿವಮೊಗ್ಗಕ್ಕೆ ಬರುತ್ತಿತ್ತು. ಶಿವಮೊಗ್ಗದಿಂದ ಸಿಗಂಧೂರಿಗೆ ದೀಪು ಹಾಗೂ ಪ್ರಜ್ವಲ್ ಹೊರಟಿದ್ದರು. ಯುವಕರು ಸ್ಕೂಟಿಯಲ್ಲಿ ವೇಗವಾಗಿ ಬರುತ್ತಿದ್ದು, ಸ್ಕೂಟಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸ್ವಾತಂತ್ರ ದಿನಾಚರಣೆಯ ಭಾಷಣಕ್ಕೆ ಸಲಹೆ ನೀಡಿ: ಮೋದಿ
ಸ್ಕೂಟಿ ಸವಾರರು ಗಂಭೀರ ಗಾಯಗೊಂಡಿದ್ದರು. ಯುವಕರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದೀಪು ಮೃತಪಟ್ಟಿದ್ದಾನೆ. ಬಸ್ಸಿನಲ್ಲಿದ್ದ 27 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.