ಧಾರವಾಡ: ಅಪಘಾತಕ್ಕೊಳಗಾದ ಕಾರ್ ನಾನೇ ಚಲಾಯಿಸುತ್ತಿದ್ದೆ. ಆದ್ರೆ ಚಾಲನೆ ವೇಳೆ ಮದ್ಯ ಸೇವಿಸಿರಲಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ವಿಜಯ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸಂಜೆ ಧಾರವಾಡದ ಕೆವಿಜಿ ಬ್ಯಾಂಕ್ ಎದುರಿಗೆ ಬೆಳಗಾವಿ ಕಡೆಯಿಂದ ಬಂದಿದ್ದ ವಿಜಯ್ ಕುಲಕರ್ಣಿ ಕಾರ್ ರಸ್ತೆ ಪಕ್ಕ ನಿಂತಿದ್ದವರ ಮೇಲೆ ಹಾಗೂ ಬೈಕ್ ಮೇಲೆ ಮೇಲೆ ಹರಿದಿತ್ತು. ಈ ಅವಘಡದಲ್ಲಿ ಶೇಖರ್ ಹುದ್ದಾರ ಮತ್ತು ಚರಣ್ ನಾಯ್ಕರ್ ಇಬ್ಬರು ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತವಾದ ಬಳಿಕ ವಿಜಯ್ ಕುಲಕರ್ಣಿ ಅಲ್ಲಿಂದ ಪರಾರಿಯಾಗಿದ್ದಾರೆ. ಅವರೇ ಕುಡಿದು ಕಾರ ಚಾಲನೆ ಮಾಡುತ್ತಿದ್ದರು ಅನ್ನೋ ಆರೋಪಗಳು ಸಹ ಕೇಳಿ ಬಂದಿದ್ದವು.
ರಾತ್ರಿ ಧಾರವಾಡದ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯ್ ಕುಲಕರ್ಣಿಯನ್ನು ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರು ನಾನೇ ಚಲಾಯಿಸುತ್ತಿದ್ದೆ. ಮುಂದೆ ಬೈಕ್ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ಅಪಘಾತವಾಗಿದೆ. ಅಪಘಾತ ನಡೆದ ತಕ್ಷಣ ನಾನೇ ಪೊಲೀಸರಿಗೆ ಮಾಹಿತಿ ನೀಡಿ, ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳು ಆಸ್ಪತ್ರೆಗೆ ಹೋದ ಬಳಿಕವೇ ಅಲ್ಲಿಂದ ತೆರಳಿದ್ದೇನೆ. ಯಾವುದೇ ಡ್ರಿಂಕ್ ಡ್ರೈವ್ ಮಾಡಿಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಈಗಾಗಲೇ ನನಗೆ ಆ ಸಂಬಂಧ ಟೆಸ್ಟ್ ಸಹ ಮಾಡಿದ್ದಾರೆ ಎಂದು ಹೇಳಿದರು.