ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್ ಮುಗಿದ ನಂತರ ಸಾರಿಗೆ ಕಾರ್ಯಾಚರಣೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ಲಾಕ್ ಡೌನ್ ಮುಕ್ತಾಯದ ನಂತರ ಹಾಗೂ ವಾರಾಂತ್ಯದ ಕರ್ಫ್ಯೂ ಕೊನೆಗೊಂಡ ಬಳಿಕ ಪ್ರಸ್ತುತ ಕೆಎಸ್‌ಆರ್‌ಟಿಸಿಯಿಂದ ಪ್ರತಿದಿನ ನಾಲ್ಕು ಸಾವಿರ ಬಸ್ಸುಗಳು ರಾಜ್ಯದ ವಿವಿಧ ಭಾಗಗಳಿಗೆ ಕಾರ್ಯಾಚರಣೆಗೊಳ್ಳುತ್ತಿವೆ. 4 ಸಾವಿರ ಕೆಎಸ್‌ಆರ್‌ಟಿಸಿ ಬಸ್ಸುಗಳಿಂದ ಒಂದು ದಿನಕ್ಕೆ ನಾಲ್ಕೂವರೆ ಕೋಟಿ ರೂ. ಆದಾಯ ಬರುತ್ತಿದ್ದು, ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ.
ಲಾಕ್ ಡೌನ್ ಪೂರ್ವದಲ್ಲಿ ಹಾಗೂ ಪ್ರಸ್ತುತ ಹೋಲಿಕೆ ಮಾಡಿದಾಗ ಶೇ.65 ಕಾರ್ಯಾಚರಣೆಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಚಾರ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ
ಕರ್ನಾಟಕದಿಂದ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಗೋವಾ ಮತ್ತು ಕೇರಳಕ್ಕೆ ಬಸ್ಸುಗಳು ಸಂಚರಿಸುತ್ತವೆ. ಇದೇ 12 ರಿಂದ ಕೇರಳಕ್ಕೆ ಬಸ್ ಸಂಚಾರ ಆರಂಭವಾಗಲಿದ್ದು, ಕೇರಳದ ಪ್ರಯಾಣಿಕರು ಕೆಲ ನಿಯಮಗಳನ್ನು ಪಾಲಿಸಲೇಬೇಕು.
ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಕೊರೊನಾ ನೆಗೆಟಿವ್ ಪರೀಕ್ಷಾ ವರದಿ ತರಬೇಕು ಅಥವಾ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರೋ ಪ್ರಮಾಣ ಪತ್ರ ಹೊಂದಿರಬೇಕು. ಕೆಎಸ್ ಆರ್ ಟಿಸಿ ಅಧಿಕಾರಿಗಳು ನೆಗೆಟಿವ್ ರಿಪೋರ್ಟ್ / ವ್ಯಾಕ್ಸಿನ್ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ತಮಿಳುನಾಡಿಗೆ ಶೀಘ್ರದಲ್ಲಿ ಅಥವಾ ಒಂದು ವಾರದಲ್ಲಿ ಕರ್ನಾಟಕದಿಂದ ಬಸ್ ಗಳ ಕಾರ್ಯಾಚರಣೆಗೊಳಲಿದೆ ಎಂದು ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ಕೊಡಗು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸ್ಸುಗಳು ಸಂಚರಿಸುತ್ತಿವೆ.