-ಆಗಸ್ಟ್ ನಲ್ಲಿ 11,753 ಕೋಟಿ ಆದಾಯಕ್ಕೆ ಪೆಟ್ಟು
ನವದೆಹಲಿ: ಜಿಎಸ್‍ಟಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಬಿಕ್ಕಟ್ಟು ಶುರುವಾಗಿದೆ. ಎಪ್ರಿಲ್ ನಿಂದ ಜುಲೈ ವರೆಗೂ ಜಿಎಸ್‍ಟಿ ಪರಿಹಾರ ಪಾವತಿಸಿಲ್ಲ ಅಂತಾ ರಾಜ್ಯಗಳು ಕಣ್ಣು ಕೆಂಪಾಗಿಸಿಕೊಂಡಿವೆ. ಕೇಂದ್ರ ಮಾತ್ರ ನಮ್ಮ ಬಳಿ ಹಣ ಇಲ್ಲ. ಬೇಕಾದ್ರೆ ಸಾಲ ಪಡೆದುಕೊಳ್ಳಿ ಎನ್ನುತ್ತಿದೆ. ಈ ನಡುವೆ ಆಗಸ್ಟ್ ತಿಂಗಳ ಜಿಎಸ್‍ಟಿ ಅಂಕಿ ಅಂಶಗಳು ಬಿಡುಗಡೆಯಾಗಿದ್ದು, ಒಂದೇ ತಿಂಗಳಲ್ಲಿ 11,753 ಕೋಟಿ ಜಿಎಸ್‍ಟಿ ಸಂಗ್ರಹ ಇಳಿಕೆಯಾಗಿದೆ.
ಆಗಸ್ಟ್ ತಿಂಗಳ ಜಿಎಸ್‍ಟಿ ಅಂಕಿ ಅಂಶಗಳು ಬಿಡುಗಡೆಯಾಗಿದೆ. ಕೇಂದ್ರ ಹಣಕಾಸು ಇಲಾಖೆ ಈ ಮಾಹಿತಿ ಬಿಡುಗಡೆ ಮಾಡಿದೆ. ಮಾಹಿತಿ ಪ್ರಕಾರ, ಆಗಸ್ಟ್ ನಲ್ಲಿ 86,449 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ. ಇದರಲ್ಲಿ 15,906 ಕೋಟಿ ರೂ. ಕೇಂದ್ರದ ಪಾಲುದಾರಿಕೆಯಲ್ಲಿ, 21,064 ಕೋಟಿ ರೂ. ರಾಜ್ಯಗಳಿಂದ ಪಾಲುದಾರಿಕೆಯಲ್ಲಿ ಸಂಗ್ರಹವಾಗಿದೆ. ಆಮದು ತೆರಿಗೆ 19,179 ಕೋಟಿ ಒಳಗೊಂಡಂತೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ 42,264 ಕೋಟಿ ರೂ ಸಂಗ್ರಹವಾಗಿದೆ. ಕಳೆದ ವರ್ಷ ಅಗಸ್ಟ್ ನಲ್ಲಿ 98,202 ಕೋಟಿ ಜಿಎಸ್‍ಟಿ ಸಂಗ್ರಹವಾಗಿತ್ತು ಕಳೆದ ವರ್ಷಕ್ಕೆ ಹೋಲಿಸಿಕೊಂಡ್ರೆ ಈ ವರ್ಷ ಆಗಸ್ಟ್ ನಲ್ಲಿ 11,753 ಕೋಟಿ ಜಿಎಸ್‍ಟಿ ಆದಾಯ ಇಳಿಕೆಯಾಗಿದೆ.
ಕಳೆದ ವರ್ಷ ಆಗಸ್ಟ್ ವೇಳೆಗೆ ಐದು ತಿಂಗಳಲ್ಲಿ 51,43,78 ಕೋಟಿ ಆದಾಯ ಸಂಗ್ರಹವಾಗಿತ್ತು, ಪ್ರಸುತ್ತ ವರ್ಷ ಆರ್ಥಿಕ ಮುಗ್ಗಟ್ಟು ಮತ್ತು ಲಾಕ್‍ಡೌನ್ ನಿಂದಾಗಿ 35,9111 ಕೋಟಿ ಮಾತ್ರ ಸಂಗ್ರಹವಾಗಿದೆ. ಅಲ್ಲಿಗೆ ಕಳೆದ ವರ್ಷಕ್ಕೆ ಹೋಲಿಸಿಕೊಂಡ್ರೆ ಐದು ತಿಂಗಳಲ್ಲಿ 1,55,267 ಕೋಟಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಇನ್ನು ಕರ್ನಾಟಕದ ಪರಿಸ್ಥಿತಿ ಕೂಡಾ ಭಿನ್ನವಾಗಿಲ್ಲ, ರಾಜ್ಯದಲ್ಲಿ ಪ್ರಸುತ್ತ ಆಗಸ್ಟ್ ತಿಂಗಳಲ್ಲಿ 5,502 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ 6,201 ಕೋಟಿ ಸಂಗ್ರಹವಾಗಿತ್ತು ಕಳೆದ ಬಾರಿಗಿಂತ ಶೇ. 11ರಷ್ಟು ಕಡಿಮೆ ಜಿಎಸ್‍ಟಿ ಸಂಗ್ರಹ ಕಡಿಮೆ ಆಗಿದ್ದು, 669 ಕೋಟಿ ಆದಾಯ ಇಳಿಕೆಯಾಗಿದೆ. ಇನ್ನು ಐದು ತಿಂಗಳಲ್ಲಿ ಸುಮಾರು ಮೂರು ಸಾವಿರ ಕೋಟಿಯಷ್ಟು ಆದಾಯ ಲಾಕ್‍ಡೌನ್ ಪಾಲಾಗಿದೆ.
ಕೇಂದ್ರ ಸರ್ಕಾರ ಈಗ ಆರ್ಥಿಕ ಸಂಕಷ್ಟದಲ್ಲಿದ್ದು ಮತ್ತೊಂದು ಕಡೆ ರಾಜ್ಯ ಸರ್ಕಾರಗಳು ಜಿಎಸ್‍ಟಿ ಪರಿಹಾರ ನೀಡುವಂತೆ ಡಿಮ್ಯಾಂಡ್ ಮಾಡಿವೆ. ರಾಜ್ಯಗಳಿಗೆ ಪರಿಹಾರ ನೀಡಲು ಸಾಧ್ಯವಾಗದ ಹಿನ್ನೆಲೆ ಆರ್‍ಬಿಐ ಅಥವಾ ಹೊರಗಡೆಯಿಂದ ಸಾಲ ಪಡೆಯಲು ಕೇಂದ್ರ ಸರ್ಕಾರ ಸಲಹೆ ನೀಡಿದ್ದು ಬಹುತೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.